ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ನಗರದ ಗುಂಡಿ ವೃತ್ತದಲ್ಲಿದ್ದ ಫುಟ್ಬಾಲ್ ಪ್ರತಿಮೆಯನ್ನು ಚುನಾವಣಾ ಅಧಿಕಾರಿಗಳು ಟಾರ್ಪಾಲ್ ಹಾಕಿ ಮುಚ್ಚಿದರು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಫುಟ್ಬಾಲ್ ಆಗಿದ್ದು, ಇದು ಮತದಾರರನ್ನು ಪ್ರಭಾವಿಸುವ ಸಾಧ್ಯತೆ ಇದೆ. ಹಾಗಾಗಿ ಪ್ರತಿಮೆಯನ್ನು ಮುಚ್ಚಬೇಕೆಂದು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಒತ್ತಾಯಿಸಿದ್ದರು.
ಜಿಲ್ಲಾ ಚುನಾವಣಾ ಅಧಿಕಾರಿ ಶಿವನಂದ್ ಕಾಪಶಿ, ಗುಂಡಿ ವೃತ್ತದಲ್ಲಿರುವ ಫುಟ್ಬಾಲ್ ಪ್ರತಿಮೆಯನ್ನು ಮುಚ್ಚಲು ಆದೇಶಿಸಿದ್ದರು. ಅಲ್ಲದೇ ನಗರದಲ್ಲಿ ಯಾವುದೇ ಪಕ್ಷದ ಚಿಹ್ನೆ ಇದ್ದರೂ ಅದನ್ನೂ ತೆರವುಗೊಳಿಸುವ ಸಂಬಂಧ ಸ್ಪಷ್ಟ ನಿರ್ದೇಶನ ನೀಡುವಂತೆ ಚು. ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
46 ಲಕ್ಷ ಮೌಲ್ಯದ ವಸ್ತು, ನಗದು ವಶ: ದಾವಣಗೆರೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ 7 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 46 ಲಕ್ಷ ಮೌಲ್ಯದ ನಗದು, ಚಿನ್ನಾಭರಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ್ ಕಾಪಶಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ವಿವಿಧ ಚೆಕ್‍ಪೋಸ್ಟಗಳಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು, ಚಿನ್ನಾಭರಣ ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಪೈಕಿ 32.32 ಲಕ್ಷ ನಗದನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಒಟ್ಟು 21 ಫ್ಲೈಯಿಂಗ್ ಸ್ಕ್ವಾಡ್, 37 ಎಸ್‍ಎಸ್‍ಟಿ ತಂಡ. 9 ಅಬಕಾರಿ ತಂಡಗಳು ಜಿಲ್ಲೆಯಲ್ಲಿ ನಿಗಾವಹಿಸಿವೆ.
ಇದನ್ನೂ ಓದಿ: ಎಟಿಎಂಗೆ ಹಾಕಲು ತಂದ 1.5 ಕೋಟಿ ಹಣದೊಂದಿಗೆ ಕಾರು ಚಾಲಕ ಪರಾರಿ