ದಾವಣಗೆರೆ: ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು ಅವರ ಅಭಿವೃದ್ಧಿಗೆ ಮಾತ್ರ ವಿನಿಯೋಗಿಸಬೇಕೇ ಹೊರತು ರಸ್ತೆ ಕಾಮಗಾರಿಗೆ ಬಳಸಬೇಡಿ ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಹಣವನ್ನು ಸರಿಯಾಗಿ ಬಳಸಿಕೊಳ್ಳಿ. ರಾಜ್ಯದಲ್ಲಿ ಒಟ್ಟು 7,652 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ನಿರ್ಮಾಣಕ್ಕೆ 2019-20ನೇ ಸಾಲಿನಲ್ಲಿ 390 ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗಿದ್ದು, 143 ಸೇತುವೆಗಳ ನಿರ್ಮಾಣ ಮಾಡಿದ್ದೇವೆ ಎಂದರು.
ಹರಿಜನ ಮತ್ತು ಗಿರಿಜನ ಕಲ್ಯಾಣ ಯೋಜನೆಯಡಿಯಲ್ಲಿ 1,958 ಕಿ.ಮೀ ಗುಣಮಟ್ಟದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಸ್‍ಡಿಪಿ ಯೋಜನೆಯಡಿಯಲ್ಲಿ 588 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಸಿಎಂ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 785 ಕಿ.ಮೀ ರಸ್ತೆ ಅಭಿವೃದ್ಧಿಯಾಗಿದೆ. ಕೆಆರ್ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ 1,395 ಕೋಟಿ ವೆಚ್ಚದಲ್ಲಿ 215 ಸೇತುವೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 4,762 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಟಾನಕ್ಕೆ ಕ್ರಮ ವಹಿಸಲಾಗಿದೆ. ಸಿಗಂದೂರು ಸೇತುವೆಗೆ 423.15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗ್ಗೊಳ್ಳಲು ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
220 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಕೈಗ್ಗೊಳಲು ಆಡಳಿತಾತ್ಮಕವಾಗಿ ಅನುಮೋದನೆ ನೀಡಲಾಗಿದ್ದು, ಈ ಕಾಮಗಾರಿ ಪ್ರಗತಿಯಲ್ಲಿದೆ. ನಬಾರ್ಡ್ ಸಹಯೋಗದೊಂದಿಗೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ 6,143 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, 17 ಕೋಟಿ ರೂ. ವೆಚ್ಚದಲ್ಲಿ ಬೀದರ್ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
22 ನ್ಯಾಯಾಲಯಗಳು, ನ್ಯಾಯಾಧೀಶರ ವಸತಿ ಗೃಹಗಳು ಹಾಗೂ ಪಿಓಸಿಎಸ್‍ಓ ನ್ಯಾಯಾಲಯಗಳ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಹರಿಜನ ಮತ್ತು ಗಿರಿಜನ ಕಾಲೋನಿಗಳಲ್ಲಿ ಉತ್ತಮ ಗುಣಮಟ್ಟದ 1,958 ಕಿ.ಮೀ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಎಸ್‍ಡಿಪಿ ಯೋಜನೆಯಡಿಯಲ್ಲಿ 588 ಕಿ.ಮೀ ರಸ್ತೆ ಹಾಗೂ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 785 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.