ದಾವಣಗೆರೆ : ಪರಿಸರಕ್ಕೆ ವಿಷಕಾರಿಯಾಗಿರುವ ಪ್ಲಾಸ್ಟಿಕ್ ತಿಂದು ಆನಾರೋಗ್ಯಕ್ಕೀಡಾಗಿದ್ದ ಹಸುವಿನ ಹೊಟ್ಟೆಯಿಂದ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಬರೋಬ್ಬರಿ 30 ಕೆಜಿಗೂ ಅಧಿಕ ಪ್ಲಾಸ್ಟಿಕ್ ಹೊರ ತೆಗೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಕಾಳಿದಾಸ ನಗರದಲ್ಲಿ ನಡೆದಿದೆ.
ಪಶುಸಂಗೋಪನೆ ಇಲಾಖೆಯ ವೈದ್ಯರು ಹಸುವಿಗೆ ರೋಮಿನಾಟಮಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅನಾರೋಗ್ಯಕ್ಕೀಡಾದ ಹಸುವಿನ ಹೊಟ್ಟೆಯಿಂದ ಪ್ಲಾಸ್ಟಿಕ್ ಸೇರಿದಂತೆ ಮತ್ತಿತರೆ ತ್ಯಾಜ್ಯವನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಪಶು ಆಸ್ಪತ್ರೆಯ ವೈದ್ಯರಾದ ಡಾ. ನಾಗಪ್ಪ, ಡಾ. ತಿಪ್ಪೇಸ್ವಾಮಿ, ಡಾ. ಶ್ರೀದೇವಿ, ಡಾ. ಸೈಯದ್ ಎಂಬ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆ ನಡೆಸಿದೆ.
ಹರಿಹರದ ಕಾಳಿದಾಸ ನಗರದ ನಿವಾಸಿ ಕೊಪ್ಪೆಲೂರು ತಿಪ್ಪೇಶ್ ಅವರಿಗೆ ಸೇರಿದ ಹಸು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಹಸು ಸರಿಯಾಗಿ ಮೇವು ಕೂಡ ಸೇವಿಸುತ್ತಿರಲಿಲ್ಲ. ಇದರಿಂದ ಚಿಂತಾಕ್ರಾಂತರಾದ ತಿಪ್ಪೇಶ್ ಅವರು ಹರಿಹರದ ಪಶು ಆಸ್ಪತ್ರೆಗೆ ಹಸುವನ್ನು ಕರೆತಂದು ಚಿಕಿತ್ಸೆ ಕೊಡಿಸಿದರು ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಹಸುವಿನ ಹೊಟ್ಟೆ ಉಬ್ಬರ ಆಗಿದ್ದರಿಂದ ಅನುಮಾನಗೊಂಡ ಪಶು ಆಸ್ಪತ್ರೆಯ ವೈದ್ಯರು ಹಸುಗೆ ರೋಮಿನಾಟಮಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾದರು. ಸತತವಾಗಿ ಮೂರುವರೆ ತಾಸು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಹೊಟ್ಟೆಯಲ್ಲಿದ್ದ ರೆಗ್ರೀನ್ ಹಾಗು ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯ ವಸ್ತುಗಳನ್ನು ಹೊರ ತೆಗೆದಿದ್ದಾರೆ.
ಹಸುವಿಗೆ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ : ಹಸುವಿಗೆ ರೋಮಿನಾಟಮಿ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ಹೊಟ್ಟೆ ಭಾಗಕ್ಕೆ ಅರವಳಿಕೆ ಮದ್ದು ನೀಡಿದ ಬೆನ್ನಲ್ಲೇ ಈ ಶಸ್ತ್ರ ನಡೆಸಲು ಹಸು ಸಹಕರಿಸಿತು. ಶನಿವಾರ ಮಧ್ಯಾಹ್ನ 2:30 ರಿಂದ ಸಂಜೆ 06 ರ ತನಕ ಒಟ್ಟು 3:30 ತಾಸಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹಸುವಿಗೆ ಚಿಕಿತ್ಸೆ ನಡೆದ ಬೆನ್ನಲ್ಲೇ ಎಂದಿನಂತೆ ಮೇವು ಸೇವಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದೆ.
ಹಸು, ಆಡು, ಕುರಿ, ಜಾನುವಾರುಗಳು ಪ್ಲಾಸ್ಟಿಕ್ಅನ್ನು ಗುರುತಿಸದೆ ಸೇವಿಸುತ್ತಿದ್ದರಿಂದ ಈ ರೀತಿಯ ಸಮಸ್ಯೆ ಆಗುತ್ತಿದೆ. ಇನ್ನುಳಿದ ಪ್ರಾಣಿಗಳು ಸಾಮಾನ್ಯವಾಗಿ ಕವರ್ನಲ್ಲಿರುವ ಆಹಾರ ಸೇವಿಸಿ ಪ್ಲಾಸ್ಟಿಕ್ ದಿಂದ ದೂರ ಉಳಿಯುತ್ತವೆ. ಅದ್ದರಿಂದ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯದೆ ಜನಸಾಮಾನ್ಯರು ಸೂಕ್ತವಾದ ಸ್ಥಳದಲ್ಲಿ ವಿಲೇವಾರಿ ಮಾಡ್ಬೇಕೆಂದು ಪಶು ವೈದ್ಯರು ಮನವಿ ನೀಡಿದ್ದಾರೆ.
ಇದನ್ನೂ ಓದಿ : ಐಟಿ ಉದ್ಯೋಗಿಯ ಗೋಪ್ರೇಮ; ಅಪಘಾತದಲ್ಲಿ ಕಾಲು ಮುರಿದ ಹಸುವನ್ನು ದತ್ತು ಪಡೆದು ಆರೈಕೆ