ಹರಿಹರ: ತಾಲೂಕಿನಲ್ಲಿರುವ ಖಾಸಗಿ ನರ್ಸಿಂಗ್ ಹೋಮ್ ಹಾಗೂ ಕ್ಲೀನಿಕ್‌ಗಳ ವೈದ್ಯರು ಸರ್ಕಾರ ಆದೇಶಗಳನ್ನು ಪಾಲಿಸುತ್ತಿಲ್ಲ. ಈ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಎಚ್ಚರಿಸಿದರು.
ನಗರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ನಗರಸಭೆಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಖಾಸಗಿ ನರ್ಸಿಂಗ್ ಹೋಮ್ ಹಾಗೂ ಕ್ಲೀನಿಕ್‌ಗಳ ವೈದ್ಯರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಈ ಹಿಂದೆ ಹಲವು ಸಭೆಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಕ್ಲೀನಿಕ್ಗಳಿಗೆ ತಪಾಸಣೆಗೆ ಬರುವ ವರದಿಯನ್ನು ಪ್ರತಿದಿನ ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ನಗರದ ಹಾಗೂ ಗ್ರಾಮೀಣ ಭಾಗದ ವೈದ್ಯರು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾಧಿಕಾರಿಗಳು ಪ್ರತಿವಾರ ಕೊರೊನಾಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಆದರೂ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಖಾಸಗಿ ಆಸ್ಪತ್ರೆಗಳಿಗೆ ಬರುವಂತಹ ರೋಗಿಗಳ ವರದಿಯನ್ನು ಇಲಾಖೆಗೆ ನೀಡದ ಪರಿಣಾಮ ಈ ಬೆಳವಣಿಗೆ ಕಂಡು ಬರುತ್ತಿದೆ ಎಂದು ಬಿಸಿ ಮುಟ್ಟಿಸಿದರು.
ಖಾಸಗಿ ಆಸ್ಪತ್ರೆಯ ವೈದ್ಯರು ಈ ರೋಗ ಲಕ್ಷಣಗಳು ಕಂಡು ಬಂದವರಿಗೆ ತಾವೇ ಚಿಕಿತ್ಸೆ ನೀಡಿ ಆ ವ್ಯಕ್ತಿಯ ರೋಗ ಉಲ್ಬಣಗೊಂಡ ಮೇಲೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಿರುವುದು ಕ್ರಿಮಿನಲ್ ಅಪರಾಧ ಆಗುತ್ತದೆ. ಆದ್ದರಿಂದ ಕೋವಿಡ್ ಲಕ್ಷಣ ಕಂಡ ಬಂದ ತಕ್ಷಣ ಮಾಹಿತಿಯನ್ನು ನೀಡುವಂತೆ ತಾಕೀತು ಮಾಡಿದರು.
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಸ್ವಾಮಿ ಮಾತನಾಡಿ, ದಾವಣಗೆರೆಯಲ್ಲಿ ಪ್ರತಿಯೊಂದು ಖಾಸಗಿ ಆಸ್ಪತ್ರೆ ವೈದ್ಯರು ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಲಕ್ಷಣದ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಈಗಾಗಲೇ ನೀಡುತ್ತಿವೆ. ಅದೇ ರೀತಿ ನೀವು ಸಹ ತಪ್ಪದೇ ತಾಲೂಕು ಆರೋಗ್ಯ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ತಾಲೂಕಿನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಹೆಚ್ಚದಂತೆ ನಿಗಾವಹಿಸಬೇಕು ಎಂದರು.
ಈ ವೇಳೆ ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಚಂದ್ರು ಮೋಹನ್, ಅಧಿಕಾರಿಗಳಾದ ರೇಣುಕಾರಾಧ್ಯ, ನಟರಾಜ್, ಲಕ್ಷ್ಮೀಪತಿ ಬಿ. ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಆರೋಗ್ಯ ಹಿರಿಯ ಸಹಾಯಕರಾದ ಎಂ.ವಿ ಹೊರಕೇರಿ, ಎಂ ಉಮ್ಮಣ್ಣ, ನಗರ ಠಾಣೆ ಪಿಎಸ್‌ಐ ಶೈಲಶ್ರೀ, ಆರೋಗ್ಯ ಇಲಾಖೆ ತಾಲೂಕು ಆಡಳಿತ ಅಧಿಕಾರಿಗಳು, ಖಾಸಗಿ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.