ಹರಿಹರ: ಕುಷ್ಠರೋಗವು ನಿಧಾನಗತಿಯಲ್ಲಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದಿದ್ದಲ್ಲಿ ಅಂಗವಿಕಲತೆಗೆ ಕಾರಣವಾಗುತ್ತದೆ ಎಂದು ಕುಷ್ಠರೋಗ ನಿವಾರಣಾಧಿಕಾರಿ ಡಾ. ಮುರುಳೀಧರ ಪಿ.ಡಿ. ಹೇಳಿದರು.
ಜ.30 ರಿಂದ ಫೆ.13 ರವರೆಗೆ ಜಿಲ್ಲಾದ್ಯಂತ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ಮೈಮೇಲೆ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದಲ್ಲಿ ಅವು ಕುಷ್ಠರೋಗದ ಲಕ್ಷಣಗಳಾಗಿರಬಹುದಾಗಿದ್ದು, ಅಲಕ್ಷ್ಯ ಮಾಡದೆ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಎಂ.ಡಿ.ಟಿ. ಚಿಕಿತ್ಸೆ ಪಡೆದುಕೊಳ್ಳಬೇಕೆಂದರು. ಚಿಕಿತ್ಸೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ 63 ಕುಷ್ಠರೋಗಿಗಳು (14 ಪಿ.ಬಿ ಮತ್ತು 49 ಎಂ.ಬಿ) ಚಿಕಿತ್ಸೆ ಪಡೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಯಾವುದೇ ಅಂಗವಿಕಲ ರೋಗಿಗಳು ಪತ್ತೆಯಾಗಿರುವುದಿಲ್ಲ ಎಂದರು.
ನಂತರ ಮಾತನಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಆರಂಭಿಕ ಹಂತದಲ್ಲಿ ಕುಷ್ಠರೋಗವನ್ನು ಪತ್ತೆಮಾಡಿ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆದುಕೊಂಡು ರೋಗವನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಈ ಆಂದೋಲನವನ್ನು ಯಶಸ್ವಿಗೊಳಿಸಲು ಸರ್ವರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.