ದಾವಣಗೆರೆ: ತಾಲೂಕಿನಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪವನ್ನು ಸಹಿಸಲ್ಲ, ಜನರಿಂದ ಲಂಚ ಕೇಳಿದ್ರೇ ಸುಮ್ಮನಿರಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚನ್ನಗಿರಿಯ ನೂತನ ಶಾಸಕ ಶಿವಗಂಗಾ ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಮೊದಲ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಚನ್ನಗಿರಿ ಕ್ಷೇತ್ರವೂ ಶೀಘ್ರ ಪ್ರಗತಿ ಸಾಧಿಸಲಿದೆ. ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜನರಿಗಾಗಿ ಜಾರಿಗೆ ತರಲಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ತಾಕೀತು ಮಾಡಿದರು.
ತಾಲೂಕಿನ ಅಧಿಕಾರಿಗಳು ಕೆಲಸ ಮಾಡುವ ವೇಳೆಯಲ್ಲಿ ಚನ್ನಗಿರಿ ಕೇಂದ್ರ ಸ್ಥಾನದಲ್ಲೇ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾವು ಕೆಲಸ ಮಾಡುವುದರಲ್ಲಿ ಏನಾದರೂ ಲೋಪಗಳು ಕಂಡು ಬಂದಲ್ಲಿ ನಾನು ಸಹಿಸಲ್ಲ. ಯಾವುದೇ ಸರ್ಕಾರಿ ಕೆಲಸಗಳನ್ನು ಅಚ್ಚುಕಟ್ಟಾಗಿ ಅದನ್ನು ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇನ್ನು ಚನ್ನಗಿರಿ ತಾಲೂಕು ಕಚೇರಿ, ಕೃಷಿ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಸೇರಿದ್ದಂತೆ ಸರ್ವೇ ಇಲಾಖೆಗಳು ಹೆಚ್ಚು ಸಾರ್ವಜನಿಕರ ದಿನನಿತ್ಯ ಜನ ಸಂಪರ್ಕಕ್ಕೆ ಬರುವ ಕಚೇರಿಗಳಾಗಿವೆ. ಈ ಕಚೇರಿಗಳಿಗೆ ಕೆಲಸಗಳಿಗಾಗಿ ಬರುವ ಜನರನ್ನು ಅಲೆದಾಡಿಸಬಾರದು. ಅವರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಪರಿಹರಿಸಬೇಕು. ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
ಎಲ್ಲಾ ಕಚೇರಿಯಲ್ಲೂ ಅಧಿಕಾರಿಗಳು ಭ್ರಷ್ಟಾಚಾರ ಇಲ್ಲದಂತೆ, ಪ್ರಾಮಾಣಿಕವಾಗಿ ಕೆಲಸ ಮಾಡಿ . ಇನ್ನು ಸರ್ವೆ ಇಲಾಖೆಯಲ್ಲಿ ರೈತರಿಗೆ ಸಂಬಂಧಪಟ್ಟ ಬಹಳಷ್ಟು ಜಮೀನಿಗೆ ಸಂಬಂಧಿಸಿದ ಕಡತಗಳು ಬಾಕಿ ಉಳಿದಿದ್ದು, ಅವುಗಳನ್ನು ಶೀಘ್ರ ಬಗೆಹರಿಸಬೇಕು. ಸರ್ವೇ ಇಲಾಖೆಯ ಅಧಿಕಾರಿಗಳು ಮೊದಲು ಪ್ರಾಮಾಣಿಕವಾಗಿ ಕೆಲಸ ಮಾಡಿ, ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊ೦ಡು ಯಾವ ರೈತರಿಗೂ ಅನ್ಯಾಯವಾಗದಂತೆ ಕೆಲಸ ನಿರ್ವಹಿಸಿ ಎಂದು ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಅರ್ಹ ಫಲಾನುಭವಿಗಳ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ ,ಪಡಿತರ ಚೀಟಿಯಲ್ಲೂ ಸಾಕಷ್ಟು ಗೊಂದಲಗಳಿವೆ. ಅವುಗಳನ್ನು ಶೀಘ್ರ ಬಗೆಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಮುಂಗಾರು ಆರಂಭವಾಗಿರುವುದರಿಂದ ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ನೀಡಬೇಕು. ಗೊಬ್ಬರ ಅಂಗಡಿಗಳಲ್ಲಿ ದರದ ಪಟ್ಟಿ ಹಾಕಬೇಕು ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ರೈತರಿಂದ ಬರುವ ಅರ್ಜಿಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚನೆ ನೀಡಿದರು.
ಇದನ್ನೂ ಓದಿ: ನೀರು ಪೂರೈಕೆಗೆ ಹಣ ಬಿಡುಗಡೆ ಮಾಡದ ಜಿಲ್ಲಾಡಳಿತ: ಸಗಣಿ, ಗೋಮೂತ್ರದಲ್ಲಿ ಸ್ನಾನಮಾಡಿ ಗ್ರಾ ಪಂ ಅಧ್ಯಕ್ಷರ ಪ್ರತಿಭಟನೆ