ದಾವಣಗೆರೆ : ಗ್ರಾಪಂ ಚುನಾವಣೆಯಲ್ಲಿ ಸೋತಿದ್ದರಿಂದ ಆಕ್ರೋಶಗೊಂಡು ಗೆದ್ದ ಅಭ್ಯರ್ಥಿ ಅಣ್ಣನ ಮೇಲೆ ಸೋತ ಅಭ್ಯರ್ಥಿ ಕಡೆಯವರು ಹಲ್ಲೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದಿದೆ.
ಗುರುಮೂರ್ತಿ ಹಲ್ಲೆಗೊಳಗಾದವರು. ಶಶಿಧರ್, ಗುರುಮೂರ್ತಿ ಮೇಲೆ ಹಲ್ಲೆ ನಡೆಸಿದ ಸೋತ ಅಭ್ಯರ್ಥಿಯ ಸಹೋದರ. ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗುರುಮೂರ್ತಿ ಕೈ ಮುರಿದಿದ್ದು, ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರಟಿಗೆರೆ ಗ್ರಾಪಂ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗುರುಮೂರ್ತಿ ಸೋದರ ಮಂಜುನಾಥ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನವೀನ್ ಸ್ಪರ್ಧಿಸಿದ್ದರು. ಎರಡು ಬಣಗಳ ನಡುವೆ ಬಾರಿ ಜಿದ್ದಾಜಿದ್ದಿನಿಂದ ಪ್ರಚಾರ ನಡೆದಿತ್ತು. ಕೊನೆಗೆ ಬಿಜೆಪಿ ಅಭ್ಯರ್ಥಿ ನವೀನ್ ಪರಾಭವಗೊಂಡಿದ್ದರು.
ಸೋಲಿನಿಂದ ಹತಾಶೆಗೊಂಡು ನವೀನ್ ಅಣ್ಣ ಶಶಿಧರ್ ಬೈದಾಡಿಕೊಂಡು ಓಡಾಡುತ್ತಿದ್ದ. ಬೈದಾಡಿದ್ದನ್ನ ಗೆದ್ದ ಮಂಜುನಾಥ ಸೋದರ ಗುರುಮೂರ್ತಿ ಆಕ್ಷೇಪಿಸಿದ್ದರು. ಈ ವೇಳೆ ನಿನ್ನೆ ಸಂಜೆ ಎರಡು ಬಣಗಳ ನಡುವೆ ಗಲಾಟೆಯಾಗಿದೆ.
ಗಲಾಟೆಯಲ್ಲಿ ಗುರುಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗುರುಮೂರ್ತಿ ಎಡಗೈ ಮುರಿದಿದೆ ಎನ್ನಲಾಗ್ತಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.