ದಾವಣಗೆರೆ: ಸತತ ಎರಡು ವರ್ಷಗಳ ಹೋರಾಟದ ಪರಿಣಾಮ ಏಷ್ಯಾದಲ್ಲೇ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು, ಆದರೆ ಸರ್ವೆ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಖಡ್ಗ ಸಂಘ ಶಾಂತಿಸಾಗರ ಸಂರಕ್ಷಣಾ ಮಂಡಳಿ ಮತ್ತೆ ಹೋರಾಟ ಮಾಡಲು ನಿರ್ಧರಿಸಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಸೂಳೆಕೆರೆ ಒತ್ತುವರಿಯಾಗಿರುವ ಜಾಗವನ್ನು ಸರ್ವೆ ಮಾಡುವ ಮೂಲಕ ತೆರವುಗೊಳಿಸಬೇಕೆಂದು ಕಳೆದ 2 ವರ್ಷಗಳಿಂದಲೂ ಸಂಘದ ಸದಸ್ಯರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರು. ಇದರ ಪ್ರತಿಫಲವಾಗಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಂದಿಸಿ ಸರ್ವೆ ಕಾರ್ಯಕ್ಕೂ ಕೂಡ ಚಾಲನೆ ನೀಡಿದ್ದರು. ಇದಕ್ಕೆ ಜನ ಪ್ರತಿನಿಧಿಗಳು ಸಹ ಸಹಕಾರ ನೀಡಿದ್ದರು.
ಇನ್ನು ಸರ್ವೆ ಕಾರ್ಯಕ್ಕೆ ಅನುಮೋದನೆ ಮತ್ತು ಅನುಮತಿ ಬಂದಿದ್ದರೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ನಡೆಸದೇ ಕುಂಟು ನೆಪ ಹೇಳುತ್ತಾ ಸರ್ವೆ ಕಾರ್ಯ ಮುಂದೂಡುತ್ತಿದ್ದಾರೆ ಎಂಬುದು ಖಡ್ಗ ಸಂಘಟನೆ ಆರೋಪವಾಗಿದೆ. ಉಪಕರಣಗಳು ಬರಬೇಕಿದೆ, ಪೊಲೀಸ್ ಸೆಕ್ಯೂರಿಟಿ ಬೇಕಿದೆ ಎಂದು ಇನ್ನಿಲ್ಲದ ಕಾರಣ ಹೇಳಿ ಮೂರು ತಿಂಗಳಿನಿಂದ ಸರ್ವೆ ಮುಂದೂಡಲಾಗುತ್ತಿದೆ.
ಈ ಹಿನ್ನಲೆ ನಾಳೆ ಸೂಳೆಕೆರೆಗೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಬಾಗಿನ ಬಿಡಲು ಬರುತ್ತಿದ್ದು, ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಖಡ್ಗ ಸಂಘಟನೆ ಮುಂದಾಗಿದೆ.