ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಹಾಗೂ ಚಿಕ್ಕಬಿದರೆ ಗ್ರಾಮ ಸೇರಿ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆ ನೀರಿನ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಚಿಕ್ಕ ಬಿದರೆ, ಸಾರಥಿ, ಗಂಗನರಸಿ, ಜೂಟುರು, ಪಾಮೇನಹಳ್ಳಿಗೆ ಸಂಪರ್ಕಿಸು ಏಕೈಕ ಸೇತುವೆ ನೀರುಪಾಲಾಗಿದ್ದು, ಚಿಕ್ಕ ಬಿದರೆ ಹಾಗೂ ಸಾರಥಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಸಾರಥಿ ಗ್ರಾಮದ ಬಳಿಯ ಕೂಗಳೆಯಲ್ಲಿರುವ ತುಂಗಭದ್ರಾ ನದಿಗೆ ಸೇರುವ ಬೃಹತ್ ದೊಡ್ಡ ಸಾರಥಿ ಹಳ್ಳಕ್ಕೆ ಈ ಸೇತುವೆಯನ್ನು ಕಟ್ಟಲಾಗಿತ್ತು. ಆದರೆ, ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿದೆ. ಇನ್ನು ಸೇತುವೆ ನಿರ್ಮಾಣ ಮಾಡಲು ಈಗಾಗಲೇ ಮೂರ್ನಾಲ್ಕು ಬಾರಿ ಶಾಸಕರು ಗುದ್ದಲಿ ಪೂಜೆ ಮಾಡಿ ಪಿಲ್ಲರ್ ನಿರ್ಮಿಸಲಾಗಿದೆ. ಆದ್ರೆ ಕಾಮಗಾರಿ ಮಾತ್ರ ಮರೀಚಿಕೆಯಾಗಿದೆ. ಮುರ್ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಈ ಸೇತುವೆ ಕಾಮಗಾರಿಗೆ ಕೆಲಸಗಾರರು ಸಿಗದೇ ಇರುವುದಕ್ಕೆ ತಡವಾಗುತ್ತಿದೆಯಂತೆ.
ಸಂಚಾರಕ್ಕೆ ಸಮಸ್ಯೆ:
ಸಾರಥಿ, ಚಿಕ್ಕ ಬಿದರಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಈ ಸೇತುವೆ ಮೂಲಕವೇ ಹೋಗಬೇಕು. ಆದ್ರೀಗ ಸೇತುವೆ ಇಲ್ಲದೆ ಜಮೀನುಗಳಿಗೆ ತೆರಳಲು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೂ ತೊಂದರೆಯಾಗಿದ್ದು, ದುಗ್ಗವತಿ ಹರಿಹರ ಮೂಲಕ ಹತ್ತು ಕಿಮೀ ಸಂಚರಿಸಿ ತಮ್ಮ ಗ್ರಾಮವನ್ನು ಸೇರುವ ದುಃಸ್ಥಿತಿ ಎದುರಾಗಿದೆ. ಇನ್ನು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲು ಈ ಎರಡು ಗ್ರಾಮದ ಮಕ್ಕಳು ಪರದಾಡಿದ್ದಾರೆ.
ಇದನ್ನೂ ಓದಿ: ಕೊಚ್ಚಿ ಹೋಯ್ತು ಸೇತುವೆ.. ಮಳೆ ಬಂದ್ರೆ ಈ ಗ್ರಾಮಗಳಿಗೆ ಸಂಪರ್ಕವೇ ಇಲ್ಲ!
ಸಾರಥಿ ಚಿಕ್ಕಬಿದರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಮಳೆ ನೀರಿಗೆ ಕೊಚ್ಚಿ ಹೋಗಿರುವುದು ಗ್ರಾಮಸ್ಥರನ್ನು ಸಂಕಷ್ಟಕ್ಕೆ ದೂಡಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಈ ಭಾಗದ ಗ್ರಾಮಸ್ಥರು ಹತ್ತು ಕಿಮೀ ಕ್ರಮಿಸಿ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದೇನೆ ಆಗಲಿ ಮೂರ್ನಾಲ್ಕು ಬಾರಿ ಗುದ್ದಲಿ ಪೂಜೆ ಮಾಡಿರುವ ರಾಜಕೀಯ ನಾಯಕರು ಆದಷ್ಟು ಬೇಗ ಕಾಮಗಾರಿ ಮುಗಿಸಲು ಸಂಬಂಧ ಪುಟ್ಟ ಗುತ್ತಿಗೆದಾರರಿಗೆ ತಾಕೀತು ಮಾಡಿ ಗ್ರಾಮಸ್ಥರಿಗೆ ನೆರವಾಗಬೇಕಿದೆ.