ದಾವಣಗೆರೆ : ಸಾವಿರಾರು ಮುಳ್ಳಿನ ರಾಶಿಯ ಮೇಲೆ ಕೂರುವುದು ಸಾಮಾನ್ಯ ಅಲ್ಲವೇ ಅಲ್ಲ. ಸಾಮಾನ್ಯವಾಗಿ ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ಸಾಕಷ್ಟು ನೋವಾಗುತ್ತದೆ. ಆದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸುಕ್ಷೇತ್ರದಲ್ಲಿ ಪ್ರತಿ ವರ್ಷ ಮುಳ್ಳಿನ ಗದ್ದಿಗೆ ಉತ್ಸವ ನಡೆಯುತ್ತದೆ. ಈ ಉತ್ಸವದ ವಿಶೇಷವೆಂದರೆ ಶ್ರೀಗಳೊಬ್ಬರು ಸಾವಿರಾರು ಜಾಲಿ ಮುಳ್ಳಿನಿಂದ ಮಾಡಲ್ಪಟ್ಟ ಮುಳ್ಳಿನ ಗದ್ದಿಗೆ ಮೇಲೆ ಕುಳಿತು ಅದರ ಮೇಲೆ ಹಾರಿ ಜಿಗಿಯುವ ಪವಾಡ ನಡೆಯುತ್ತದೆ. ನಂತರ ಶ್ರೀಗಳು ನುಡಿಯುವ ಕಾರ್ಣಿಕ ಭವಿಷ್ಯವನ್ನು ಕೇಳಿ ಭಕ್ತರು ಪುನೀತರಾಗುತ್ತಾರೆ.
ಪುಣ್ಯ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿತು ಮುಳ್ಳು ಗದ್ದಿಗೆ ಉತ್ಸವ.. ಚನ್ನಗಿರಿ ತಾಲೂಕಿನ ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ವರ್ಷವು ಕೂಡ ಮುಳ್ಳು ಗದ್ದಿಗೆ ಉತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಭಾನುವಾರ ಬೆಳಗಿನ ಜಾವ ಆರು ಗಂಟೆಯಿಂದಲೇ ಆರಂಭವಾದ ಮುಳ್ಳು ಗದ್ದಿಗೆ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ಪುಣ್ಯಕ್ಷೇತ್ರದ ರಾಮಲಿಂಗೇಶ್ವರ ಸ್ವಾಮೀಜಿಯವರು ಮುಳ್ಳಿನ ಗದ್ದಿಗೆ ಮೇಲೆ ಕುಳಿತು ಪವಾಡ ಸೃಷ್ಟಿಸಿದರು. ಸಾವಿರಾರು ಜಾಲಿ ಮುಳ್ಳುಗಳಿಂದ ನಿರ್ಮಾಣವಾದ ಗದ್ದಿಗೆ ಮೇಲೆ ಕೂರುವ ಸ್ವಾಮೀಜಿಯವರನ್ನು ಇಡೀ ಗ್ರಾಮದ ತುಂಬಾ ಮೆರವಣಿಗೆ ನಡೆಸುವುದು ಪ್ರತಿ ವರ್ಷ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಇದಲ್ಲದೆ ಸ್ವಾಮೀಜಿ ಅವರು ಇದೇ ಮುಳ್ಳಿನ ಗದ್ದಿಗೆ ಮೇಲೆ ಹಾರಿ ಜಿಗಿಯುವ ದೃಶ್ಯ ಭಕ್ತರ ಮೈನವಿರೇಳಿಸುತ್ತದೆ.
ಇದನ್ನೂ ಓದಿ : ಸಚಿವ ಅಶ್ವತ್ಥನಾರಾಯಣ್ ಹೇಳಿಕೆ ಖಂಡಿಸಿ ಹೊನ್ನಾಳಿ ಬಂದ್ : ಕುರುಬ ಸಮಾಜದಿಂದ ಪ್ರತಿಭಟನೆ
ಇನ್ನು, ಈ ಮುಳ್ಳಿನ ಗದ್ದಿಗೆ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಹಲವಾರು ಕಡೆಗಳಿಂದ ಸಾವಿರಾರು ಭಕ್ತರು ರಾಮಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಪುಣ್ಯಕ್ಷೇತ್ರದಿಂದ ರಾಮಲಿಂಗೇಶ್ವರ ಶ್ರೀಯವರನ್ನು ಮುಳ್ಳಿನ ಗದ್ದಿಗೆ ಮೇಲೆ ಕೂರಿಸಿ ಕೆಂಗಾಪುರದ ವರೆಗೆ ಮೆರವಣಿಗೆ ಸಾಗುತ್ತದೆ. ಮುಳ್ಳಿನ ಗದ್ದಿಗೆ ಮೂಲಕವೇ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ರಾಮಲಿಂಗೇಶ್ವರ ಸ್ವಾಮೀಜಿ ಅವರು ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಅಕ್ಷರ ದಾಸೋಹಿಯಾಗಿದ್ದಾರೆ.
ಭಕ್ತರಲ್ಲಿ ಆತಂಕ ಸೃಷ್ಟಿಸಿದ ಕಾರ್ಣಿಕ ಭವಿಷ್ಯ ನುಡಿ : ಪ್ರತಿ ವರ್ಷ ನಡೆಯುವ ಮುಳ್ಳಿನ ಗದ್ದಿಗೆ ಉತ್ಸವದಲ್ಲಿ ರಾಮಲಿಂಗೇಶ್ವರ ಶ್ರೀಗಳು ಕಾರ್ಣಿಕವನ್ನು ನುಡಿಯುತ್ತಾರೆ. ಮುಳ್ಳಿನ ಗದ್ದಿಗೆ ಮೇಲೆಯೇ ಊರು ಗೋಲನ್ನು ಆಕಾಶದತ್ತ ಮುಖಮಾಡಿ "ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು ಉದರ್ಯಾವೋ ಅಂತರಂಗದ ಹಕ್ಕಿ ಹಾರಿತೋ" ಎಂದು ಕಾರ್ಣಿಕ ನುಡಿದರು. ಈ ಕಾರ್ಣಿಕದ ಭವಿಷ್ಯವನ್ನು ಭಕ್ತರು ತಮ್ಮದೇಯಾದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರ ಅರ್ಥ ಇನ್ನು ಮುಂದೆ ಬರುವ ದಿನಗಳಲ್ಲಿ ಇನ್ನಷ್ಟು ಆಪತ್ತುಗಳು ಎದುರಾಗಲಿದೆ ಅಂತಾ ಈ ಭಾಗದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಸೋಲುವ ಭೀತಿಯಿಂದ ಕಾಂಗ್ರೆಸ್ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ: ಮಹೇಶ್ ಟೆಂಗಿನಕಾಯಿ