ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆಗೆ ಏರುತ್ತೇವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿಯು ದರ್ಬಾರ್ ನಡೆಸಲು ರಣತಂತ್ರ ರೂಪಿಸುತ್ತಿದೆ. ಇನ್ನು ನಿರ್ಣಾಯಕರಾಗಿರುವ ಐವರು ಪಕ್ಷೇತರರು ಹಾಗೂ ಓರ್ವ ಜೆಡಿಎಸ್ ಅಭ್ಯರ್ಥಿ ನಡೆ ನಿಗೂಢವಾಗಿದೆ.
22 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಕಾಂಗ್ರೆಸ್ಗೆ ಓರ್ವ ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರ ಬೆಂಬಲ ಇದೆ ಎಂದು ಹೇಳಲಾಗ್ತಿದೆ. ಆದ್ರೆ ಬೆಂಬಲ ನೀಡುವ ಬಗ್ಗೆ ನಿರ್ಣಾಯಕರಾಗಿರುವವರು ಮಾತ್ರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಜೆಡಿಎಸ್ನಿಂದ ಗೆದ್ದಿರುವ ನೂರ್ ಜಹಾನ್ ತಮಗೆ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಹೇಳಿದ್ದಾರೆ. ಅಲ್ಲದೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 17 ಸ್ಥಾನಗಳಲ್ಲಿ ಜಯ ಗಳಿಸಿರುವ ಬಿಜೆಪಿಯ ಅಧಿಕಾರಕ್ಕೇರುವ ಪ್ರಯತ್ನ ಮುಂದುವರೆದಿದೆ. ಈಗಾಗಲೇ ಮೂವರು ಪಕ್ಷೇತರರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.
ದೇವರಮನೆ ಶಿವಕುಮಾರ್ ಮಹಾನಗರ ಪಾಲಿಕೆ ಮೇಯರ್ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆಯಾದರೂ ಕೈ ಜಿಲ್ಲಾಧ್ಯಕ್ಷ ಮಂಜಪ್ಪ ಈ ರೀತಿಯ ಯಾವುದೇ ತೀರ್ಮಾನ ಪಕ್ಷದಲ್ಲಿ ಆಗಿಲ್ಲ. ಹೈಕಮಾಂಡ್ ಯಾರಿಗೆ ಸೂಚಿಸುತ್ತದೆಯೋ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೇಳಿದವರು ಮೇಯರ್ ಆಗುತ್ತಾರೆ. ಮೀಸಲಾತಿ ಇನ್ನೂ ಅಂತಿಮವಾಗದ ಕಾರಣ ಇನ್ನೆರಡು ದಿನಗಳಲ್ಲಿ ಅಧಿಕಾರ ಹಿಡಿಯುವ ಸಂಬಂಧ ಸ್ಪಷ್ಟ ರೂಪುರೇಷೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಬಿಜೆಪಿಯು ಇಬ್ಬರು ಪಕ್ಷೇತರರು, ಜೆಡಿಎಸ್ ಅಭ್ಯರ್ಥಿ ಬೆಂಬಲ ಪಡೆಯಲು ತೀವ್ರ ಕಸರತ್ತು ನಡೆಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜೊತೆ ಈ ಸಂಬಂಧ ಸಮಾಲೋಚನೆ ನಡೆಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ನಿರ್ಣಾಯಕರ ಕಡೆ ಎಲ್ಲರ ಚಿತ್ತ ನೆಟ್ಟಿದೆ.