ದಾವಣಗೆರೆ : ಲಾಕ್‍ಡೌನ್ ವಿಧಿಸಲಾಗಿದ್ದರೂ ಜನ ಗುಂಪು ಗುಂಪಾಗಿ ರಸ್ತೆಗಿಳಿಯುತ್ತಿರುವುದು ಕಂಡು ಬರುತ್ತಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶಬೇ-ಎ-ಬರಾಅತ್ ಹಾಗೂ ಗುಡ್‍ಫ್ರೈಡೆ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆಗಿಳಿಯುವವರಿಗೆ ಹೂ ಮಾಲೆ ಹಾಕುವುದು, ಮಂಗಳಾರತಿ, ವಿನಂತಿ, ಗದರಿಸುವುದು, ಆದೇಶಿಸಿ ಇಲ್ಲಿಯವರೆಗೆ ಸಾಕಾಯ್ತು. ಆದರೂ ಸಹ ನಿರ್ಲಕ್ಷ್ಯ ತೋರುವವರ ಸಂಖ್ಯೆ ನಿಲ್ಲುತ್ತಿಲ್ಲ. ಹಾಗಾಗಿ, ಇನ್ನು ಮುಂದೆ ಕಠಿಣ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ನಾಗರಿಕ ಸೌಹಾರ್ದ ಸಭೆ ಜನಸಾಮಾನ್ಯರಿಗೆ ದಿನಸಿ ಸಾಮಾಗ್ರಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಮನೆಯ ಬೀದಿಗಳಲ್ಲಿಯೇ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ. ಆದರೂ ಜನರು ರಸ್ತೆಗಿಳಿಯುತ್ತಿದ್ದಾರೆ. ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯವಹರಿಸಿದಲ್ಲಿ ಅಂತಹ ವ್ಯಾಪಾರಸ್ಥರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.ಎಸ್ಪಿ ಹನುಮಂತರಾಯ ಮಾತನಾಡಿ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕಾನೂನು ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಲು ಸಂಪೂರ್ಣ ಅಧಿಕಾರವನ್ನು ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ನೀಡಿದ್ದಾರೆ. ಜನಸಾಮಾನ್ಯರು ಅನಗತ್ಯವಾಗಿ ರಸ್ತೆಗಿಳಿದರೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು. ಇದಕ್ಕೆ ಸಾರ್ವಜನಿಕರು ಅವಕಾಶ ನೀಡದಿರುವಂತೆ ಎಚ್ಚರಿಸಿದರು.
ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಸ್ವಚ್ಚತೆ ಹಾಗೂ ದೈನಂದಿನ ಪೂಜೆ, ಪ್ರಾರ್ಥನೆ ಮಾಡಲು ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಸಾರ್ವಜನಿಕರು ಮನೆಯಲ್ಲಿದ್ದು ಪ್ರಾರ್ಥನೆ, ನಮಾಜ್, ಪೂಜೆ ಮಾಡುವಂತೆ ತಿಳಿಸಿದರು. ವಿನಾಕಾರಣ ರಸ್ತೆಗಿಳಿಯುವ ಬೈಕ್ ಸವಾರರಿಗೆ ಸಮುದಾಯಗಳ ಮುಖಂಡರು ಜಾಗೃತಿ ಮೂಡಿಸಿ ಮನೆಯಲ್ಲಿರಲು ಸೂಚಿಸಬೇಕು. ಎಲ್ಲ ಕಾರ್ಯಗಳನ್ನು ಜಿಲ್ಲಾಡಳಿತದ ಮೇಲೆ ಹಾಕಬೇಡಿ. ಇದರಲ್ಲಿ ನಿಮ್ಮ ಹೊಣೆಗಾರಿಕೆಯೂ ಸಹ ಮುಖ್ಯವಾಗಿದೆ ಎಂದರು.
ದಾವಣಗೆರೆ ಸೇರಿದಂತೆ ಅಕ್ಕಪಕ್ಕದ 4 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳು ಸದ್ಯಕ್ಕೆ ನೆಗೆಟಿವ್ ಎಂದು ವರದಿಯಾಗಿವೆ. ದೇಶದಲ್ಲಿ ಹಾಕಲಾಗಿರುವ ಲಾಕ್‍ಡೌನ್ ಅವಧಿ ಇನ್ನೂ ಮುಂದುವರೆಯಬಹುದು. ಆದ ಕಾರಣ ಸಾರ್ವಜನಿಕರು ರೋಗ ನಿಯಂತ್ರಣಕ್ಕೆ ಮನೆಯಲ್ಲಿರುವುದೇ ಮದ್ದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಮಹಮ್ಮದ್ ನಿಯಾಜ್, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.