ದಾವಣಗೆರೆ: ಹಣದ ವಿಚಾರಕ್ಕೆ ಶುರುವಾದ ವೈಷಮ್ಯ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿ ಹಳ್ಳಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಶಿವಯೋಗೇಶ್ ಕೊಲೆಗೀಡಾದ ವ್ಯಕ್ತಿ. ನರಸಿಂಹ ಬಂಧಿತ ಕೊಲೆ ಆರೋಪಿ.
ಪ್ರಕರಣದ ಸಂಪೂರ್ಣ ವಿವರ: ಶಿವಯೋಗೇಶ್ ಕಟ್ಟಡ ನಿರ್ಮಾಣ ಕೆಲಸದ ಮೇಸ್ತ್ರಿಯಾಗಿದ್ದನು. ಹಣದ ಅಗತ್ಯತೆಗೆ ಶಿವಯೋಗೇಶ್ ಬಳಿ ಸಾಲ ಪಡೆದಿದ್ದ. ಆರೋಪಿ ಪಡೆದ ಹಣ ಹಿಂದಿರುಗಿಸಲು ವಿಳಂಬ ಮಾಡಿದ್ದನು. ಶಿವಯೋಗೇಶ್ ಹಣ ವಾಪಸ್ ನೀಡುವಂತೆ ನರಸಿಂಹನ ಬಳಿ ಹಲವು ಬಾರಿ ಕೇಳಿಕೊಂಡಿದ್ದ. ಇದಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಶಿವಯೋಗೇಶ್ ಹಣ ಕೇಳುವುದನ್ನು ಮುಂದುವರೆಸಿದ್ದಾನೆ. ಸಾಲವನ್ನು ಪದೇ ಪದೆ ಕೇಳ್ತಿಯಾ ಎಂದು ಕೋಪಗೊಂಡ ನರಸಿಂಹ, ಶಿವಯೋಗೇಶ್ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
"ಹಲ್ಲೆ ವಿಚಾರವಾಗಿ ಈ ಹಿಂದೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹ ಕೆಲವು ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸಿ ಹೊರಬಂದಿದ್ದ" ಎಂದು ದಾವಣಗೆರೆ ಗ್ರಾಮಾಂತರ ಪೊಲೀಸರು ಮಾಹಿತಿ ನೀಡಿದ್ದಾರೆ.
"ಜೈಲಿನಿಂದ ಬಿಡುಗಡೆಯಾದ ಬಳಿಕ ಆರೋಪಿ ನರಸಿಂಹನಿಗೆ ಹಣ ನೀಡುವಂತೆ ಶಿವಯೋಗೇಶ್ ದಿನನಿತ್ಯ ಕಿರುಕುಳ ನೀಡ್ತಿದ್ದನಂತೆ. ಈ ಕಿರುಕುಳದಿಂದ ಬೇಸತ್ತು, ನಿನ್ನ ಬಳಿ ಮಾತನಾಡೋದಿದೆ ಬಾ ಎಂದು ಶಿವಯೋಗೇಶ್ನನ್ನು ಕರೆಸಿಕೊಂಡ ನರಸಿಂಹ, ಬಡಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ" ಎಂದು ದಾವಣಗೆರೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಕೊಲೆ ನಡೆದ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೀ ಅಂಗಡಿ ದೋಚಿದ ಕಳ್ಳರು: ದಾವಣಗೆರೆ ನಗರದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಅಂಗಡಿ-ಮುಂಗಟ್ಟುಗಳನ್ನು ಟಾರ್ಗೆಟ್ ಮಾಡಿರುವ ಕಳ್ಳರು ಎಂಸಿಸಿಬಿ ಬ್ಲಾಕ್‌ನಲ್ಲಿದ್ದ ಟೀ ಅಂಗಡಿಯ ಬಾಗಿಲು ಮುರಿದು 40 ಸಾವಿರ ನಗದು ಹಾಗು 37 ಸಾವಿರ ಬೆಲೆ ಬಾಳುವ ಸಿಗರೇಟ್ ಪ್ಯಾಕ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕ ಮಂಜುನಾಥ್ ಶನಿವಾರ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಆಗಮಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪತ್ನಿಗೆ ಕಳ್ಳಿ, ಕಳ್ಳಿ ಎಂದು ಹೀಯಾಳಿಸುತ್ತಿದ್ದ ಪರಿಚಿತರು.. ಅವಮಾನ ಸಹಿಸಲಾಗದೇ ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ