ದಾವಣಗೆರೆ/ವಿಜಯಪುರ: ಏಕ ಕಾಲಕ್ಕೆ ಟ್ರ್ಯಾಕ್ಟರ್ ಹಾಗೂ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸಾವನಪ್ಪಿರುವ ದಾರುಣ ಘಟನೆ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಬಳಿ ತಡರಾತ್ರಿ ನಡೆದಿದೆ. ಇನ್ನು ಕಾರಿನಲ್ಲಿದ್ದ ಇಬ್ಬರು ಸಾವನಪ್ಪಿದರೆ ಓರ್ವನಿಗೆ ಗಂಭೀರ ಗಾಯಗಳಾಗಿವೆ.
ಬಿಲ್ಲಹಳ್ಳಿ ಮಂಜುನಾಥ (24), ಪಾಂಡೊಮಟ್ಟಿ ಅಮೃತ್ (23) ಸಾವನ್ನಪ್ಪಿದ ಯುವಕರು ಎಂದು ತಿಳಿದು ಬಂದಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಯುವಕರು ದಾವಣಗೆರೆಯಲ್ಲಿ ಮದುವೆ ಮುಗಿಸಿಕೊಂಡು ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಗೆ ಕಾರಿನಲ್ಲಿ ತೆರಳುತ್ತಿದ್ದರು.
ಈ ವೇಳೆ, ರಾತ್ರಿ ಎದುರಿಗೆ ಬರುತ್ತಿದ್ದ ಟ್ರಾಕ್ಟರ್ಗೆ ಮೊದಲು ಕಾರು ಡಿಕ್ಕಿ ಹೊಡೆದಿದ್ದು ಬಳಿಕ ಎದುರು ಬರುತ್ತಿದ್ದ ಲಾರಿಗೆ ವಾಪಸ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಸಂಪೂರ್ಣವಾಗಿ ಕಾರು ನಜ್ಜುಗುಜ್ಜಾಗಿದೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಈ ಅಪಘಾತ ಕಾರು ಚಾಲನ ಅಜಾಗರೂಕತೆಯಿಂದ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಮೃತರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನವಂತೂ ಮುಗಿಲು ಮುಟ್ಟಿದೆ. ಮದುವೆ ಮುಗಿಸಿ ಮನೆ ಸೇರುವ ಮುನ್ನ ಇಬ್ಬರು ಯುವಕರು ಸ್ಮಶಾನ ಸೇರಿರುವುದು ಎರಡು ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಮದುವೆ ವಯಸ್ಸಿನ ಮಕ್ಕಳನ್ನು ಬಲಿಪಡೆದ ಜವರಾಯನಿಗೆ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕ್ಯಾಂಟರ್ ವಾಹನ ಅಪಘಾತ - ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯದ ಭಯಾನಕತೆ ಎಂಥವರ ಎದೆಯಲ್ಲೂ ಝಲ್ ಎನಿಸುವಂತಿದೆ. ರಸ್ತೆ ಹಂಪ್ ನೋಡದೇ ಅತಿ ವೇಗವಾಗಿ ಬಂದ ಕ್ಯಾಂಟರ್ ವಾಹನ ಇಂಡಿ ಪಟ್ಟಣದ ಮುಖ್ಯ ರಸ್ತೆಯಲ್ಲಿನ ವೃತ್ತಕ್ಕೆ ಗುದ್ದಿದ್ದು, ಪರಿಣಾಮ ವಾಹನ ಸಂಪೂರ್ಣ ಜಖಂ ಆಗಿದೆ.
ನಿನ್ನೆ ರಾತ್ರಿ 11ಗಂಟೆ ಸುಮಾರಿಗೆ ಇಂಡಿ ಪಟ್ಟಣಕ್ಕೆ ಅತಿ ವೇಗವಾಗಿ ಬಂದ ಕ್ಯಾಂಟರ್ ವಾಹನ ಮುಖ್ಯರಸ್ತೆಯ ವೃತ್ತಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಕ್ಯಾಂಟರ್ ವಾಹನ ಪಕ್ಕದಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕ್ಯಾಂಟರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಂಡಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಈ ಅಪಘಾತದಲ್ಲಿ ಚಾಲಕನ ಪಕ್ಕದಲ್ಲಿದ್ದ ಮಲಕು ಮಾನೆ ಎಂಬಾತ (36)ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಅಲ್ಲದೇ, ಚಾಲಕ ಭಾಗಣ್ಣ ಕಾರಜೋಳ ಗಂಭೀರ ಗಾಯಗೊಂಡಿದ್ದು, ಆತನನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಟ್ಟಿಗೆ ಇಳಿಸಿ ವಾಪಸ್ ಆಗುತ್ತಿದ್ದ ಕ್ಯಾಂಟರ್ ವಾಹನ ಅತಿವೇಗವಾಗಿ ಚಾಲನೆ ಮಾಡುತ್ತಿದ್ದು, ರೋಡ್ ಹಂಪ್ಸ್ ನೋಡದೇ ವಾಹನ ಓಡಿಸಿರುವ ಪರಿಣಾಮ ಈ ಘಟನೆಗೆ ಕಾರಣವಾಗಿದೆ ಎಂದು ಕಂಡು ಬರುತ್ತಿದೆ. ಕ್ಯಾಂಟರ್ ಡಿಕ್ಕಿಯಾಗಿದ್ದ ಅದೇ ವೃತ್ತದ ಬಳಿಯ ಅಂಗಡಿಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಸದ್ಯ ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ: ವಿವಿಧ ಅಪರಾಧ ಪ್ರಕರಣದಲ್ಲಿ ಮೂವರ ಸಾವು; ಕೊಲೆ ಆರೋಪಿಗೆ ಜೀವವಾಧಿ ಶಿಕ್ಷೆ