ಬೆಂಗಳೂರು: ನವೆಂಬರ್ 12 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಮಾಜಿ ಮೇಯರ್ ಸೇರಿ 9 ಪದಾಧಿಕಾರಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಬಿಜೆಪಿ ಉಚ್ಚಾಟನೆ ಮಾಡಿದೆ.
ಪಕ್ಷದ ಸೂಚನೆಯನ್ನು ಮೀರಿ ಬಂಡಾಯವಾಗಿ ಸ್ಪರ್ಧೆ ಮಾಡಿರುವ ಮತ್ತು ಬಂಡಾಯ ಅಭ್ಯರ್ಥಿಗಳನ್ನು ಬಹಿರಂಗವಾಗಿ ಬೆಂಬಲಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಧಾರದ ಮೇಲೆ 9 ಪದಾಧಿಕಾರಿಗಳ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ.
ಬಂಡಾಯವಾಗಿ ಕಣಕ್ಕಿಳಿದಿದ್ದ ಮಾಜಿ ಮೇಯರ್ ಉಮಾ ಪ್ರಕಾಶ್, ಶಶಿಕಲಾ ಪರಸನಗೌಡ, ಅಥೀತ್ ರಾವ್ ಅಂಬರ್ ಕರ್, ಎನ್ ರಾಜಶೇಖರ್, ಪ್ರೀತಿ ರವಿಕುಮಾರ್, ಪದ್ಮಾವತಿ ಮಂಜುನಾಥ್ ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಬೆಂಬಲಿಸಿದ ಪರಸನಗೌಡ, ಎ.ವೈ ಪ್ರಕಾಶ್, ಮಲ್ಲಿಕಾರ್ಜುನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.