ಹರಿಹರ: ಅನಧಿಕೃತ ಬಡಾವಣೆ ಮತ್ತು ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಮಳೆ ಬಂದಾಗ ಈ ರೀತಿಯ ಅನಾಹುತ ಸಂಭವಿಸುತ್ತವೆ ಎಂದು ತಾಲೂಕಿನಲ್ಲಿ ಜಲಾವೃತವಾದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟಿದ್ದಾರೆ.
ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಜಲಾವೃತವಾದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಅವರು, ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು. ಅಲ್ಲದೆ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಕಸವನ್ನು ಚರಂಡಿಗಳಿಗೆ ಹಾಕದೆ ಶೇಖರಿಸಿ ನಗರಸಭೆಯ ಕಸದ ವಾಹನದಲ್ಲಿ ಹಾಕಿದರೆ ಈ ರೀತಿಯ ಅನಾಹುತವಾಗುವುದನ್ನು ತಪ್ಪಿಸ ಬಹುದು ಎಂದರು.
ರಾಜ ಕಾಲುವೆ ಮತ್ತು ಚರಂಡಿಗಳಲ್ಲಿ ಹೆಚ್ಚಿನ ಹೂಳು ತುಂಬಿರುವುದರಿಂದ ಕಾಳಿದಾಸ ನಗರದ ಮನೆಗಳಲ್ಲಿ 2 ರಿಂದ 3 ಅಡಿಗಳಷ್ಟು ನೀರು ತುಂಬಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಅನಾಹುತ ಆಗದ ಹಾಗೆ ಅಧಿಕಾರಿಗಳಿಗೆ ನೀಲಿನಕ್ಷೆಯನ್ನು ಸಿದ್ದಪಡಿಸಲು ಸೂಚಿಸಲಾಗಿದ್ದು, ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಹಾನಿಗೊಳಾಗದ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿಯನ್ನು ತರಿಸಿಕೊಂಡು ಎನ್.ಡಿ.ಆರ್.ಎಫ್‌ನ ನಿಯಮದ ಪ್ರಕಾರ ಪರಿಹಾರವನ್ನು ನೀಡಲಾಗುವುದು. ಅವಶ್ಯಕತೆ ಬಿದ್ದಲ್ಲಿ ಗಂಜೀ ಕೇಂದ್ರ(ಕಾಳಜಿ ಕೇಂದ್ರ)ವನ್ನು ಸ್ಥಾಪಿಸುವಂತೆ ತಾಲ್ಲೂಕು ದಂಡಾಧಿಕಾರಿಯಾದ ರಾಮಚಂದ್ರಪ್ಪನವರಿಗೆ ಆದೇಶ ನೀಡಿದರು.