ದಾವಣಗೆರೆ : ಮನೆಯ ಕಟ್ಟುವಾಗ ಪಾಯ ತೆಗೆದ ವೇಳೆ ನಿಧಿ ಸಿಕ್ಕಿದೆ ಎಂದು ಉಡುಪಿ ಮೂಲದ ವ್ಯಕ್ತಿಯನ್ನು ನಂಬಿಸಿ 200 ಗ್ರಾಂ ನಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 5.20 ಲಕ್ಷ ರೂ ಗಳನ್ನು ಖದೀಮರು ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿಯ ಪೇಡೂರು ಮೂಲದ ಸಂತೋಷ ಶೆಟ್ಟಿ ವಂಚನೆಗೊಳಗಾದ ವ್ಯಕ್ತಿ. ಕುಂಕುಮ ಮಿಶ್ರಣ ಮಾಡಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದರಿಂದ ಸಂತೋಷ ಶೆಟ್ಟಿ ಬಹುಬೇಗ ಮೋಸ ಹೋಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಸಂತೋಷ್ ಶೆಟ್ಟಿ ಈ ನಕಲಿ ಚಿನ್ನದ ಜಾಲಕ್ಕೆ ಬಲಿಯಾಗಿದ್ದು, 5.20 ಲಕ್ಷ ನೀಡಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಸಂತೋಷ ಎಂಬ ಹೆಸರು ಹೇಳಿಕೊಂಡು ಬಂದಿದ್ದ ವ್ಯಕ್ತಿ ವಂಚಿಸಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಸಿದ್ದನಮಠ ಕ್ರಾಸ್ ಬಳಿಯ ಮಾವಿನ ತೋಟವೊಂದರಲ್ಲಿ ಘಟನೆ ನಡೆದಿದೆ.
ಮನೆ ಪಾಯ ತೆಗೆಯುವಾಗ ಚಿನ್ನ ಸಿಕ್ಕಿದೆ ಎಂದು ಸಂತೋಷ್ ಶೆಟ್ಟಿಗೆ ಪುಸಲಾಯಿಸಿದ ಖದೀಮರು 20 ಲಕ್ಷ ಇದ್ರೆ ಹೇಳಿ, ಕೆಜಿಗಟ್ಟಲೆ ಚಿನ್ನದ ನಾಣ್ಯಗಳನ್ನು ಕೊಡುತ್ತೇವೆ ಎಂದು ಹೇಳಿದ್ದರಂತೆ. ಮೊದಲು ಸಂತೋಷ್ ಶೆಟ್ಟಿಯನ್ನು ಭೇಟಿ ಮಾಡಿದ ಅವರು ಮೊದಲು ಒಂದು ಅಸಲಿ ನಾಣ್ಯವನ್ನು ಕೊಟ್ಟು ನಂಬಿಸಿದ್ದಾರೆ. ಬಳಿಕ ಕರೆದು 200 ಗ್ರಾಂ ನಷ್ಟು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಐದು ಲಕ್ಷ ಪಡೆದು ವಂಚನೆ ಮಾಡಿದ್ದಾರೆ. ಸಂತೇಬೆನ್ನೂರು ಪೋಲಿಸ್ ಠಾಣೆಯಲ್ಲಿ ವಂಚನೆಗೊಳಗಾದ ವ್ಯಕ್ತಿ ನೀಡಿರುವ ದೂರಿನ ಮೇರೆಗೆ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಚಿನ್ನದ ನಾಣ್ಯಗಳ ವಂಚನೆ ಪ್ರಕರಣಗಳು: ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ 214 ಪ್ರಕರಣಗಳು ನಡೆದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೀಗ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪ್ರಕರಣ ಹೊಸದಾಗಿ ಸೇರ್ಪಡೆಯಾಗಿದೆ. ನಕಲಿ ನಾಣ್ಯಗಳ ವಂಚನೆ ಜಾಲಗಳು ಹೆಚ್ಚಾಗುತ್ತಿದ್ದು, ಈ ಕೆಲಸ ಮಾಡಲು ಗ್ಯಾಂಗ್ ಇದೆ. ಈ ಗ್ಯಾಂಗ್ ವ್ಯಕ್ತಿಗಳನ್ನು ನಂಬಿಸಿ ಪುಸಲಾಯಿಸಲು ಸಂಬಳ ಕೊಟ್ಟು ಕೆಲಸಗಾರರನ್ನು ಇಟ್ಟಿರ್ತಾರೆಂಬ ಸ್ಪೋಟಕ ವಿಚಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ಹೇಳುತ್ತಿದ್ದಾರೆ.
ಹೀಗಾಗಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ದಾವಣಗೆರೆ ಪೋಲಿಸರು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರೂ ಕೂಡ ಜನ ವಂಚನೆಗೊಳಗಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಮೋಸದ ಜಾಲದೊಳಗೆ ಮೋಹಕ್ಕೊಳಗಾಗಿ ಬಿದ್ದರೆ ಹಣ ಕಳೆದುಕೊಳ್ಳುವುದು ನಿಶ್ಚಿತ.
ಇದನ್ನೂ ಓದಿ : ಭದ್ರಾವತಿಯಲ್ಲಿ ಮೂವರು ಮನೆಗಳ್ಳರ ಬಂಧನ: 39 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ವಶ