ದಾವಣಗೆರೆ: ನಗರದ ರೈಸ್ ಮಿಲ್ನಲ್ಲಿ ವನ್ಯಜೀವಿಗಳು ಪತ್ತೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವರೊಬ್ಬರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಕರಿಬಸವಯ್ಯ, ಸಂಪಣ್ಣ, ಸೆಂಥಿಲ್ಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಮಾಜಿ ಸಚಿವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 2ಕ್ಕೆ ಮುಂದೂಡಿದೆ. ಮಾಜಿ ಸಚಿವರ ಪರ ನ್ಯಾಯವಾದಿ ಪ್ರಕಾಶ ಪಾಟೀಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ರೈಸ್ ಮಿಲ್ನಲ್ಲಿ ಪ್ರಾಣಿಗಳು: ಡಿಸೆಂಬರ್ 21ರಂದು ಮಾಜಿ ಸಚಿವರ ಒಡೆತನದ ಮಿಲ್ ಹಿಂಭಾಗದ ಫಾರ್ಮ್ ಹೌಸ್‌ನಲ್ಲಿ 11 ಕೃಷ್ಣಮೃಗ, 7 ಜಿಂಕೆಗಳು, 7 ಕಾಡುಹಂದಿ, 3 ಮುಂಗುಸಿ ಹಾಗೂ 2 ನರಿಗಳು ಪತ್ತೆಯಾಗಿದ್ದವು. ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಈ ಎಲ್ಲ ವನ್ಯಜೀವಿಗಳನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ವನ್ಯಜೀವಿಗಳನ್ನು ಆನಗೋಡಿನ ಕಿರುಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.
ದೂರು-ಪ್ರತಿದೂರು: ರೈಸ್ ಮಿಲ್ನಲ್ಲಿ ವನ್ಯ ಜೀವಿಗಳು ಪತ್ತೆ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿತ್ತು. ಎರಡು ಪಕ್ಷಗಳ ಪ್ರಮುಖರಿಂದ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು-ಪ್ರತಿದೂರು ದಾಖಲಾಗಿವೆ. ಕಾಂಗ್ರೆಸ್ ಮುಖಂಡರಾದ ಎ. ನಾಗರಾಜ್ ಅವರು 13 ಜನರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ನಾಯಕರಾದ ಮಾಜಿ ಸಚಿವರನ್ನು ಕಾಡುಗಳ್ಳ ವೀರಪ್ಪನ ರೀತಿ ಬಿಂಬಿಸಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರತಿಭಟನೆ ಮಾಡಿ ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು. ಅದರಂತೆ, ಕಾಂಗ್ರೆಸ್ ಪಕ್ಷಕ್ಕೆ ಕೌಂಟರ್ ಕೊಟ್ಟಿದ್ದ ಬಿಜೆಪಿ ಕಾರ್ಯಕರ್ತರು ಸಹ ಕೈ ನಾಯಕರ ವಿರುದ್ಧ ಪ್ರತಿದೂರು ನೀಡಿದ್ದರು.
ಇದನ್ನೂ ಓದಿ: ಮಾಜಿ ಸಚಿವರ ರೈಸ್‌ಮಿಲ್‌ನಲ್ಲಿ ವನ್ಯಜೀವಿಗಳು ಪತ್ತೆ ಕೇಸ್: ಅರಣ್ಯ ಇಲಾಖೆ ಕಚೇರಿಗೆ ಬಿಜೆಪಿ ಮುತ್ತಿಗೆ