ದಾವಣಗೆರೆ: ಹಳ್ಳಿಯಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ನೌಕರಿ ಸೇರಿ ಇದೀಗ ಹಳ್ಳಿಯಲ್ಲೊಂದು ಮನೆ ಕಟ್ಟಿಸಬೇಕೆಂದು ಆ ಅಧಿಕಾರಿ ಬಯಸಿದ್ದರು. ಆದ್ರೆ ಆ ಊರಿನ ಸರ್ಕಾರಿ ಶಾಲೆ ಪರಿಸ್ಥಿತಿ ನೋಡಿ ತನ್ನ ಮನೆ ಕಟ್ಟಿಸುವುದಕ್ಕೆ ಕೂಡಿಸಿಟ್ಟಿದ್ದ ಹಣದಿಂದ ಸರ್ಕಾರಿ ಶಾಲೆ ಕಟ್ಟಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ನಾಲ್ಕು ಕೊಠಡಿಗಳನ್ನು ಕೆಡವಿ 56 ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ 4 ಸ್ಮಾರ್ಟ್ ಕೊಠಡಿ ಕಟ್ಟಿಸಿಕೊಟ್ಟಿದ್ದಾರೆ.
ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ ಒ.ಎಸ್ ದಯಾನಂದ ಅವರು ನಲ್ಕುಂದ ಗ್ರಾಮದಲ್ಲಿ ಮನೆ ಮಾತಾಗಿದ್ದಾರೆ. ಬೆಂಗಳೂರಿನ ಕೃಷಿ ಸಂಶೋಧನಾ ಕೇಂದ್ರದ ಸದಸ್ಯರಾಗಿರುವ ದಯಾನಂದ ಅವರ ಪತ್ನಿ ಬಿ.ಎಸ್ ಕವಿತಾ ಎಂಟೆಕ್ ಮಾಡಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ದಯಾನಂದ ತಾಯಿ ಸುನಂದಮ್ಮ ಇನ್ನೂ ನಲ್ಕುಂದ ಗ್ರಾಮದಲ್ಲಿ ವಾಸವಾಗಿದ್ದು, ಆ ಗ್ರಾಮದಲ್ಲಿ ದಯಾನಂದ ದಂಪತಿ ಒಂದು ಮನೆ ಕಟ್ಟಿಸಬೇಕೆಂದಿದ್ದರು.
ದಂಪತಿ ಮನೆ ಕಟ್ಟಿಸಿಬೇಕೆಂದು ಹಳ್ಳಿಗೆ ಬಂದಿದ್ದಾಗ ಅಲ್ಲಿನ ಸ್ಕೂಲ್ ಟೀಚರ್ಗಳು ಶಾಲೆಗೆ ಏನಾದರು ದೇಣಿಗೆ ಕೊಡಿಸಿ ಎಂದು ಮನವಿ ಮಾಡಿದ್ದರು. ದಂಪತಿ ಸ್ಕೂಲ್ ಬಳಿ ಭೇಟಿ ನೀಡಿದಾಗ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ನೋಡಿ ಬೇಸರಗೊಂಡರು. ಆ ಸ್ಕೂಲ್ಗೆ ತಟ್ಟೆ ಲೋಟ ಅಲ್ಮೇರಾ ಕೊಡುವ ಬದಲಾಗಿ ಹಳೇ ಶಿಥಿಲಾವಸ್ಥೆ ಕಟ್ಟಡ ಕೆಡವಿದ್ರೆ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಶಾಲೆಯ ಹೊಸ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಸ್ಕೂಲ್ ಎಸ್ಡಿಎಂಸಿ, ಶಿಕ್ಷಕರು, ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಒಂದು ವಾರದೊಳಗೆ ಶಿಕ್ಷಣ ಇಲಾಖೆಯಿಂದ ಅಪ್ರೂವಲ್ ಕೂಡ ಸಿಕ್ಕಿತು. ದಯಾನಂದ ಅವರ ಮನೆ ಕಟ್ಟಿಸುವುದನ್ನು ಮುಂದೂಡಿ ತನ್ನ ಕನಸಿನಂತೆ ಶಾಲಾ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಅವರು ಓದಿದ ಶಾಲೆಗೆ ಹೊಸ ರೂಪ ಕೊಟ್ಟಿದ್ದು, ಅವರ ಕಾರ್ಯಕ್ಕೆ ಇಡೀ ಗ್ರಾಮ ಚಿರಋಣಿಯಾಗಿದೆ.
ಇದನ್ನೂ ಓದಿ: ಸಿಎಂ ಆಗಲು ಯೋಗ, ಯೋಗ್ಯತೆ ಬೇಕು: ಸಚಿವ ಬಿ.ಸಿ ಪಾಟೀಲ್
ನಲ್ಕುಂದ ಗ್ರಾಮದ ಈ ಹೊಸ ಶಾಲಾ ಕೊಠಡಿ ಉದ್ಘಾಟನೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಆಗಮಿಸಿ ನಾಲ್ಕು ಕೊಠಡಿಗಳನ್ನು ಉದ್ಘಾಟಿಸಿ ದಯಾನಂದ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯ ನಿಜಕ್ಕೂ ಅಭಿನಂದನೆಗೆ ಅರ್ಹ. ಅವರ ಸ್ವಂತ ಮನೆಯನ್ನು ಕಟ್ಟಿಸುವುದನ್ನು ಮುಂದೂಡಿ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿರುವುದು ಅವರಿಗೆ ಸರ್ಕಾರಿ ಶಾಲೆ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ.