ದಾವಣಗೆರೆ: ಕಳೆದುಹೋದ ಮೊಬೈಲ್ ಮರಳಿ ತನ್ನ ಮಾಲೀಕನ ಕೈ ಸೇರುವುದು ಸುಲಭವಲ್ಲ. ಮೊಬೈಲ್ ಕಳೆದುಕೊಂಡವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೂ ಸಹ ಅದು ಸಿಗಲು ಸಾಕಷ್ಟು ಸಮಯ ಬೇಕಾಗಬಹುದು, ಇಲ್ಲವೇ ಕೆಲವೊಮ್ಮೆ ದೊರಕದೆಯೂ ಇರಬಹುದು. ಅದರೆ ಕೇಂದ್ರ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸಿಇಐಆರ್ (CEIR) ಪೋರ್ಟಲ್ ಬಳಸಿಕೊಂಡು ಕಳುವಾದ ಮೊಬೈಲ್ ಬ್ಲಾಕ್ ಮಾಡಬಹುದಾಗಿದೆ. ಈ ಪೋರ್ಟಲ್ ಮೂಲಕವೇ ದಾವಣಗೆರೆ ಜಿಲ್ಲಾ ಪೊಲೀಸರು ಮೊಬೈಲ್ ಪತ್ತೆ ಹಚ್ಚಿ ಸಂಬಂಧಪಟ್ಟ ವ್ಯಕ್ತಿಗೆ ಒಪ್ಪಿಸಿದ್ದಾರೆ.
ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಪತ್ತೆಯಾದ ಜಿಲ್ಲೆಯ ಮೊದಲ ಪ್ರಕರಣ ಇದಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಅವರು ಮೊಬೈಲ್ನ್ನು ವಾರಸುದಾರರಿಗೆ ಮರಳಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಇಎನ್ (CEN) ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಇದ್ದರು.
ಸಿಇಐಆರ್ ಪೋರ್ಟಲ್ ಬಳಕೆ ಹೇಗೆ?: ನಕಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಕಡಿವಾಣ ಹಾಕಲು, ಫೋನ್ ಕಳ್ಳತನ ನಿಯಂತ್ರಣ, ಗ್ರಾಹಕರ ಹಿತಾಸಕ್ತಿ ರಕ್ಷಣೆ ಮತ್ತು ಕಾನೂನು ಸಂಸ್ಥೆಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ದೂರಸಂಪರ್ಕ ಇಲಾಖೆಯು ಸಿಇಐಆರ್ ಪೋರ್ಟಲ್ ಆರಂಭಿಸಿದೆ. ಸಿಇಐಆರ್ ಪೋರ್ಟಲ್ ಎಲ್ಲ ಮೊಬೈಲ್ ಫೋನ್ ಆಪರೇಟರ್‌ಗಳ ಐಎಂಇಐ (IMEI) ಡೇಟಾಬೇಸ್ ಜೊತೆ ಸಂಪರ್ಕ ಸಾಧಿಸುವುದಲ್ಲದೇ, ಬ್ಲಾಕ್ ಮಾಡಿದ ಮೊಬೈಲ್ ಪತ್ತೆಗೆ ಎಲ್ಲ ನೆಟ್‌ವರ್ಕ್ ಆಪರೇಟರ್‌ಗಳೊಂದಿಗೆ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಐಎಂಇಐ ಪೋರ್ಟಲ್ ಮೂಲಕ ಸಹ ಬ್ಲಾಕ್ ಮಾಡಿರುವ ಕಾರಣ ಕಳುವಾದ ಇಲ್ಲವೇ ಕಳೆದುಕೊಂಡ ಮೊಬೈಲ್ನಲ್ಲಿನ ಸಿಮ್ ಬದಲಾವಣೆ ಮಾಡಲಾಗಿದ್ದರೂ ಸಹ ಅದು ಯಾವುದೇ ಕಾರ್ಯ ನಿರ್ವಹಿಸುವುದಿಲ್ಲ.
ದಾವಣಗೆರೆಯಲ್ಲಿ ಮೊಬೈಲ್ ಕಳೆದುಕೊಂಡ ವ್ಯಕ್ತಿಯು ಕೂಡಲೇ ಬ್ರೌಸರ್ವೊಂದರ ಮೂಲಕ ನೂತನ ಸಿಇಐಆರ್ ಪೋರ್ಟಲ್ಗೆ ಭೇಟಿ ನೀಡಿ ತಮ್ಮ ಮೊಬೈಲ್ನ ಸಂಪೂರ್ಣ ಮಾಹಿತಿ ನೀಡಿ, ನೊಂದಾಯಿಸಿದ್ದರು. ಇದರ ಮೂಲಕ ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ದಾವಣಗೆರೆ ಪೊಲೀಸರು ಈ ಪೋರ್ಟಲ್ ಸಹಾಯದಿಂದ ಮೊಬೈಲ್ ಪತ್ತೆ ಮಾಡಿದ್ದಾರೆ.
ಎಸ್ಪಿ ರಿಷ್ಯಂತ್ ಮನವಿ: ವಾರಸುದಾರರಿಗೆ ಮೊಬೈಲ್ ಒಪ್ಪಿಸಿ ಮಾತನಾಡಿರುವ ಎಸ್ಪಿ ಸಿಬಿ ರಿಷ್ಯಂತ್, ಸಾರ್ವಜನಿಕರು ತಮ್ಮ ಮೊಬೈಲ್ ಕಳ್ಳತನ, ಸುಲಿಗೆ ಅಥವಾ ಕಾಣೆಯಾದರೆ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ನೋಂದಾವಣೆ ಮಾಡಿಕೊಳ್ಳಬೇಕು. ಈ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜನರಿಗೆ ಮನವಿ ಮಾಡಿದರು.
ಇದನ್ನೂ ಓದಿ: ನಿಂತಿದ್ದ ಬಸ್ಗಳಿಗೆ ಡಿಕ್ಕಿ ಹೊಡೆದ ಟ್ರಕ್.. 14 ಜನ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ