ದಾವಣಗೆರೆ : ಚಾಲಕನ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ ದಿಬ್ಬಣದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, 15 ಕ್ಕೂ ಅಧಿಕ ಮಂದಿ ಗಾಯಗೊಂಡ ದಾರುಣ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ವರಲಕ್ಷ್ಮೀ, ಅನುಷಾ, ರತ್ನಮ್ಮ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಮೈಲುಗಲ್ಲಿಗೆ ದಿಬ್ಬಣ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಮುಗುಚಿ ಬಿದ್ದು, ಈ ಅವಘಡ ಸಂಭವಿಸಿದೆ.
![canter-accident](https://etvbharatimages.akamaized.net/etvbharat/prod-images/5886040_th.jpg)
ಆಂಧ್ರ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಶಿವಮೊಗ್ಗಕ್ಕೆ ಲಾರಿ ಹೋಗುತ್ತಿತ್ತು. ಆಂಧ್ರ ಪ್ರದೇಶದ ಯುವಕನ ಜೊತೆ ಶಿವಮೊಗ್ಗದ ಯುವತಿಯ ವಿವಾಹ ನಿಶ್ಚಯ ಮಾಡಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಇಬ್ಬರು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿದ್ದಾರೆ.