ದಾವಣಗೆರೆ : ಕಂಕಣ ಭಾಗ್ಯ ಕೂಡಿ ಬಂದ್ರೆ ಯಾರದ್ದು ತಾನೇ ಮದುವೆ ಆಗಲ್ಲ ಹೇಳಿ. ಆದ್ರೆ, ಇಲ್ಲೊಬ್ಬ ಹುಟ್ಟು ದಿವ್ಯಾಂಗನ ಬಾಳಲ್ಲಿ ಯುವತಿಯೊಬ್ಬಳು ಬೆಳಕಾಗಿ ಬಂದಿದ್ದಾಳೆ. ಜೀವನದಲ್ಲಿ ಕೈಹಿಡಿದು ನಡೆಸುತ್ತೇನೆ ಎಂದು ಒಪ್ಪಿಕೊಂಡ ಆ ಯುವತಿ ನಿರ್ಧಾರಕ್ಕೆ ಮಣಿದ ಆ ದಿವ್ಯಾಂಗ ಯುವಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಇಡೀ ಗ್ರಾಮಸ್ಥರು ಖುದ್ದು ಖರ್ಚುವೆಚ್ಚ ಹಾಕಿ, ಧಾಮ್‌ಧೂಮ್ ಎಂದು ಮದುವೆ ಮಾಡಿದ್ದಾರೆ.
ಇಂತಹದ್ದೊಂದು ಅಪರೂಪದ ಘಟನೆಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಎಂಬ ಗ್ರಾಮ ಸಾಕ್ಷಿಯಾಗಿದೆ. ಇದೇ ಗ್ರಾಮದ ದಿವ್ಯಾಂಗ ಯುವ ಪದವೀಧರ ರಂಗಸ್ವಾಮಿಯವರ ಬಾಳಲ್ಲಿ ಇದೇ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ವಧು ಬೆಳಕಾಗಿ ಬಂದಿದ್ದಾಳೆ. ಇಬ್ಬರ ಮದುವೆಯನ್ನು ಭರಮಸಮುದ್ರ ಗ್ರಾಮದ ಗ್ರಾಮಸ್ಥರು ಗ್ರಾಮ ದೇವತೆ ಯಲ್ಲಮ್ಮ ದೇವತೆಯ ಸಮ್ಮುಖದಲ್ಲಿ ನೆರವೇರಿಸಿದ್ದಾರೆ.
ವಧು ಕರಿಬಸಮ್ಮ ಅವರು ಶಿಕ್ಷಣ ಪಡೆಯದಿದ್ರೂ ವರ ರಂಗಸ್ವಾಮಿ ಅವರ ದೂರದ ಸಂಬಂಧಿಯಾಗಿದ್ದರಿಂದ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾಳೆ. ಅಲ್ಲದೇ, ದಿವ್ಯಾಂಗ ಯುವಕ ರಂಗಸ್ವಾಮಿ ಇಡೀ ಭರಮಸಮುದ್ರ ಗ್ರಾಮಸ್ಥರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದರಿಂದ ಇಡೀ ಗ್ರಾಮಸ್ಥರು ಚಿನ್ನದ ತಾಳಿ, ಚಿನ್ನದ ಓಲೆ, ಸೀರೆ ಸೇರಿದಂತೆ ಮದುವೆಗೆ ಬೇಕಾಗುವ ಪ್ರತಿ ವಸ್ತುಗಳನ್ನು ತಂದು ಖರ್ಚು ವೆಚ್ಚ ಭರಿಸಿ ಮದುವೆ ಮಾಡಿಸಿರುವುದು ವಿಶೇಷ.
ಕಂಪ್ಯೂಟರ್‌ನಲ್ಲಿ ಅಪಾರ ಜ್ಞಾನ.. ಇದಲ್ಲದೆ ಮದುವೆಗೆ ಆಗಮಿಸಿದವರಿಗೆ ರುಚಿ ರುಚಿಯಾದ ಕೇಸರಿಬಾತ್ ಹಾಗೂ ಉಪ್ಪಿಟ್ಟು ತಯಾರಿಸಿ ಉಣಬಡಿಸಲಾಯಿತು. ರಂಗಸ್ವಾಮಿ ಹಾಗೂ ಕರಿಬಸಮ್ಮ ತಮ್ಮ ಗ್ರಾಮಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಗ್ನಿ ಸಾಕ್ಷಿಯಾಗಿ ಗ್ರಾಮಸ್ಥರೇ ಕರಿಬಸಮ್ಮಳನ್ನು ಧಾರೆ ಎರೆದುಕೊಟ್ಟರು.
ರಂಗಸ್ವಾಮಿಯವರು ಸಾಕಷ್ಟು ಜ್ಞಾನ ಉಳ್ಳವರಾಗಿದ್ದು, ಕಂಪ್ಯೂಟರ್‌ನಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸಾಕಷ್ಟು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಪ್ರಸ್ತುತ ಅವರು ಅಂಧ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿರುವುದು ವಿಶೇಷ.
ಓದಿ: ಪಠ್ಯಪುಸ್ತಕದಲ್ಲಿ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ : ಕೆ ಎಸ್ ಈಶ್ವರಪ್ಪ