ದಾವಣಗೆರೆ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಅದರೊಂದಿಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವುದು ನನ್ನ ಮೊದಲ ಗುರಿ ಎಂದು ಹೇಳಿರುವ ಕೂಡಲಸಂಗಮ ಪೀಠದ ಬಸವಜಯ ಮೃತುಂಜಯ್ಯ ಶ್ರೀ, ಮತ್ತೆ 2ಎ ಮೀಸಲಾತಿ ಹೋರಾಟದ ಬಗ್ಗೆ ಸುಳಿವು ನೀಡಿದರು.
ಅಂದಿನ ಸರ್ಕಾರ 2ಎ ಮೀಸಲಾತಿ ನೀಡುವ ಬದಲು 2ಡಿ ಮೀಸಲಾತಿ ನೀಡಿದ್ದರು. ಆದರೆ 2ಡಿ ಮೀಸಲಾತಿ ಬಗ್ಗೆ ಹೈಕೋರ್ಟ್ನಲ್ಲಿ ಸ್ಟೇ ತಂದಿದ್ದರಿಂದ ಇಡೀ ಸಮುದಾಯದಲ್ಲಿ ನಿರಾಸೆ ಭಾವನೆ ಮೂಡಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ. ಸರಿಪಡಿಸಿ ನ್ಯಾಯ ಕೊಡಿ ಎಂದು ವಿನಂತಿ ಮಾಡಿಕೊಂಡಿದ್ದೇವೆ. ನಮ್ಮ ಸಮಾಜ ಹಲವು ಕಡೆ ಚುನಾವಣೆಗೆ ಆಶೀರ್ವಾದ ಮಾಡಿದೆ. ಆ ಋಣ ಭಾರ ಸಿದ್ದರಾಮಯ್ಯನವರ ಮೇಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಸರ್ಕಾರ ಬರಬೇಕಾದ್ರೆ ಪಂಚಮಸಾಲಿ ಸಮಾಜದ ಸಹಕಾರ ಸಹ ಇದೆ. ಈ ವಿಚಾರ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಅಧಿವೇಶನ ಮುಗಿದ ಬಳಿದ ಸಂವಿಧಾನ ಹಾಗೂ ಕಾನೂನು ಪಂಡಿತರ ಸಭೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈಗ ಅಧಿವೇಶನ ಮುಗಿದು ಒಂದು ತಿಂಗಳಾಗುತ್ತಾ ಬಂತು. ಬೇಗ ಸಭೆ ಕರೆದು ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಈಗಾಗಲೇ ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿಚಾರ ಕೇಂದ್ರಕ್ಕೆ ಶಿಪಾರಸು ಮಾಡಿದ್ದಾರೆ. ಅದೇ ರೀತಿ ನಮಗೂ 2ಎ ಮೀಸಲಾತಿಗೆ ಶಿಫಾರಸು ಮಾಡಲಿ ಎಂದು ಹೇಳಿದರು.
ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ ಅವರ ನೇತೃತ್ವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆಯುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಹಾಗೂ 2ಎ ಮೀಸಲಾತಿ ಹೋರಾಟಕ್ಕೇನು ವ್ಯತ್ಯಾಸ ಇಲ್ಲ. ಅದಕ್ಕೆ ಮೈನಾರಿಟಿ ಸೌಲಭ್ಯ ಸಿಗುತ್ತದೆ. 2ಎ ಹೋರಾಟಕ್ಕೆ ರಾಜ್ಯದಲ್ಲಿ ಒಬಿಸಿಯಡಿಯಲ್ಲಿ ಸೌಲಭ್ಯ ಸಿಗುತ್ತದೆ ಎಂದು ತಿಳಿಸಿದರು.
ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾಗದೇ ಇರಬಹುದು. ಆದರೆ 2ಎ ಮೀಸಲಾತಿ ಹೋರಾಟವನ್ನು ದಡ ಸೇರಿಸಬೇಕಿದೆ. ಜಾಮ್ದಾರ್ ನೇತೃತ್ವದ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ. ಆದ್ರೆ ನಾನು ಸದ್ಯ ಪಂಚಮಸಾಲಿ ಸಮಾಜದ ಮೀಸಲಾತಿಗೆ ಓಡಾಡುತ್ತಿದ್ದೇನೆ ಎಂದು ಹೇಳಿದರು.
ಜಾತಿಗಣತಿ ವಿಚಾರ: ಲಿಂಗಾಯತ ಸಮುದಾಯ ಮತ್ತು ನಮ್ಮ ಸಮುದಾಯದ ನಡುವೆ ತಪ್ಪು ಕಲ್ಪನೆ ಇದೆ. ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಆದರೆ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅದರ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿಲ್ಲ. ಜಾತಿಗಣತಿಯಿಂದ ನಮ್ಮ ಸಮುದಾಯಕ್ಕೆ ತೊಂದರೆ ಉಂಟಾಗುವ ಲಕ್ಷಣಗಳು ಕಂಡುಬಂದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ವಿಳಂಬ ನೀತಿ : ಸಿಎಂ ನಿವಾಸದ ಮುಂದೆ ಸತ್ಯಾಗ್ರಹದ ಎಚ್ಚರಿಕೆ