ದಾವಣಗೆರೆ: ಸರ್ಕಾರದ ಬಳಿ ಹಣವಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರಿದ್ರ ಸರ್ಕಾರ, ದರಿದ್ರ ರಾಜ್ಯ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಲ್ಲ. ಕರ್ನಾಟಕ ಸುಭಿಕ್ಷ ರಾಜ್ಯ. ಆರ್ಥಿಕ ಪರಿಸ್ಥಿತಿಯ ಇತಿಮಿತಿ ಅರಿತು ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಸಿಎಂ ಆಗಿದ್ದ ಸಿದ್ದರಾಮಯ್ಯರಿಗೂ ಪರಿಸ್ಥಿತಿ ಬಗ್ಗೆ ಗೊತ್ತಿದೆ. ವಿಪಕ್ಷದವರಾಗಿದ್ದೇವೆ ಎಂಬ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ನಮಗೆಲ್ಲರಿಗೂ ತೃಪ್ತಿ ಇದೆ. ಆಯಾ ಇಲಾಖೆಗಳ ಮೂಲಕ ಅನುದಾನ ನೀಡಿದ್ದಾರೆ. ರೇಣುಕಾಚಾರ್ಯ, ಭೈರತಿ ಬಸವರಾಜ್ರಂತೆ ಒಬ್ಬೊಬ್ಬರಿಗೆ ಬಜೆಟ್ ಮಂಡಿಸಲು ಆಗದು. ಯಾವ ಬಿಜೆಪಿ ಶಾಸಕರೂ ಅಸಮಾಧಾನಗೊಂಡಿಲ್ಲ. ಮುಂಬರುವ ದಿನಗಳಲ್ಲಿ ಕೇಂದ್ರದಿಂದ ಆರ್ಥಿಕ ನೆರವು ಬರಲಿದೆ ಎಂದರು.