ದಾವಣಗೆರೆ: ಆ ಗ್ರಾಮ ಬರದಿಂದ ಕಂಗೆಟ್ಟಿತ್ತು. ಹನಿ ನೀರಿಲ್ಲದೆ ಕೆರೆ ಭಣಗುಡುತ್ತಿತ್ತು. ಆದ್ರೀಗ ಮಳೆರಾಯ ಗ್ರಾಮದತ್ತ ಕರುಣೆ ತೋರಿದ್ದಾನೆ. ಕೆರೆಗೆ ಜೀವಜಲ ತುಂಬುವಂತೆ ಮಾಡಿದ್ದಾನೆ.
ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಈ ಕೆರೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಹನಿ ನೀರಿರಲಿಲ್ಲ. ಹೀಗಾಗಿ, ಇಡೀ ಗ್ರಾಮದ ರೈತರು, ಜಾನುವಾರುಗಳು ಹೈರಾಣಾಗಿದ್ದರು. ಹನಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಅಲ್ಲಿತ್ತು. ಇದೀಗ ಬಹುದೊಡ್ಡ ಸಮಸ್ಯೆಯನ್ನು ಮಳೆರಾಯ ದೂರ ಮಾಡಿದ್ದಾನೆ. ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆ ಸಂಪೂರ್ಣ ತುಂಬಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಐವತ್ತು ವರ್ಷಗಳ ಬಳಿಕ ಕೆರೆ ತುಂಬಿದ್ದರಿಂದ ಆನಗೋಡು ಗ್ರಾಮಸ್ಥರು ಕೆರೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಾಲ್ಮೀಕಿ ಸ್ವಾಮೀಜಿ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಗ್ರಾಮಸ್ಥರ ಸಂತಸದಲ್ಲಿ ಭಾಗಿಯಾದರು.
ಈ ಕೆರೆ ತುಂಬಿದ್ದರಿಂದ ರೈತರಿಗೆ ಅಡಿಕೆ, ತೆಂಗು ತೋಟಗಳಿಗೆ ನೀರುಣಿಸಲು ಸಹಕಾರಿಯಾಗಿದೆ. ಜೊತೆಗೆ ಜನ ಜಾನುವಾರುಗಳಿಗೆ ಉಪಯುಕ್ತವಾಗಿದ್ದು, ಮುಂದಿನ ನಾಲ್ಕು ವರ್ಷಗಳ ಕಾಲ ರೈತರು ನೀರಿನ ಚಿಂತೆ ಮಾಡುವಂತಿಲ್ಲ.