ದಾವಣಗೆರೆ: ರಿಯಲ್ ಎಸ್ಟೇಟ್ ಬೆನ್ನು ಬಿದ್ದು ಹತ್ಯೆಗೀಡಾದ ಹೊನ್ನಾಳಿಯ ಬೀರಲಿಂಗೇಶ್ವರ ದೇವಾಲಯದ ದೇವರ ಮಗ ಖ್ಯಾತಿಯ ಕುಮಾರಸ್ವಾಮಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿ ಐವರ ಹೆಡೆಮುರಿ ಕಟ್ಟಿದ್ದಾರೆ.
ಮೂರು ಜನ ಬಾಡಿಗೆ ಹಂತಕರ ಸಹಾಯದಿಂದ ದೇವರಮಗ ಕುಮಾರಸ್ವಾಮಿ ಅವರನ್ನ ರಿಯಲ್ ಎಸ್ಟೇಟ್ ದಂಧೆಕೋರರು ಮುಗಿಸಿದ್ದರು. ಹೀಗಾಗಿ ಮೂರು ಜನ ಬಾಡಿಗೆ ಹಂತಕರು ಸೇರಿ ಹೊನ್ನಾಳಿ ಪೊಲೀಸರು ಒಟ್ಟು ಐದು ಜನರನ್ನು ಬಂಧಿಸಿದ್ದಾರೆ. ಇದೇ 23 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಕುಮಾರಸ್ವಾಮಿ (45) ಕೊಲೆ ನಡೆದಿತ್ತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಜೊತೆ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದ ಹೊನ್ನಾಳಿ ನಿವಾಸಿ ಮೋಹನ್ (28), ಹಾಸನದ ದಿನೇಶ್ (38) ಬಾಡಿಗೆ ಹಂತಕರಾದ ಹೊನ್ನಾಳಿ ತಾಲೂಕಿನ ಹಿಂಡಸಘಟ್ಟ ಗ್ರಾಮದ ಕಾರ್ತೀಕ್ (29), ಪ್ರಾಣೇಶ್ (32) ಹಾಗೂ ಸುನೀಲ್ ನಾಯ್ಕ (25) ಬಂಧಿತ ಆರೋಪಿಗಳು. ಕೊಲೆಯಾದ ಕುಮಾರಸ್ವಾಮಿ ಜೊತೆ ಮೋಹನ್ ಹಾಗೂ ದಿನೇಶ್ ಇಬ್ಬರು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು.
ಮೋಹನ್ ಹಾಗೂ ದಿನೇಶ್ ಕುಮಾರಸ್ವಾಮಿ ಅವರಿಂದ 20 ಲಕ್ಷ ಹಣ ಪಡೆದಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಬಾಡಿಗೆ ಹಂತಕರ ಸಹಾಯದಿಂದ ಕುಮಾರಸ್ವಾಮಿಯನ್ನು ಅವರಿಬ್ಬರು ಸೇರಿ ಹತ್ಯೆ ಮಾಡಿದ್ದರು. ಇದರ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಇದೆಂಥಾ ತನಿಖೆ.. ಪಂಜಾಬ್ನಲ್ಲಿ ಎರಡೂವರೆ ವರ್ಷದ ಹಿಂದೆ ಸತ್ತ ವ್ಯಕ್ತಿಯ ವಿರುದ್ಧ ಈಗ ಡ್ರಗ್ಸ್ ಕೇಸ್!