ದಾವಣಗೆರೆ: ವೃದ್ಧ ದಂಪತಿ ಇರಲು ಮನೆ ಇಲ್ಲದೆ ಗುಡಿಸಲು ಹಾಕಿಕೊಳ್ಳಲು ಪಾಲಿಕೆ ಸದಸ್ಯರೊಬ್ಬರಿಗೆ ಅನುಪಯುಕ್ತ ಬ್ಯಾನರ್ ಕೇಳಿದ್ದಕ್ಕಾಗಿ ಪಾಲಿಕೆ ಸದಸ್ಯ ಎರಡು ಲಕ್ಷ ರೂ ವೆಚ್ಚದಲ್ಲಿ ಮನೆಯನ್ನೇ ನಿರ್ಮಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ನಗರದ ಶೇಖರಪ್ಪ ಬಡಾವಣೆಯ 19 ನೇ ವಾರ್ಡ್ ಪಾಲಿಕೆ ಸದಸ್ಯ ಶಿವಪ್ರಕಾಶ್ ಮನೆ ನಿರ್ಮಿಸಿ ಕೊಟ್ಟು ವೃದ್ಧ ದಂಪತಿಗೆ ಆಸರೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಶಿವಪ್ರಕಾಶ್ ಬಳಿ ಆಗಮಿಸಿದ ಈ ದಂಪತಿ (ಹೆಸರು ತಿಳಿದುಬಂದಿಲ್ಲ) ಸೊಸೆಯಂದಿರ ದಬ್ಬಾಳಿಕೆಯಿಂದ ಬೇಸತ್ತು ಗುಡಿಸಲು ಹಾಕಿಕೊಂಡು ಜೀವನ ನಡೆಸಲು ನಿರ್ಧರಿಸಿ ಬ್ಯಾನರ್ ಕವರ್ ಇದ್ರೆ ಕೊಡಿ ಎಂದು ಅಂಗಲಾಚಿದ್ದರು. ಇದರಿಂದ ಮನನೊಂದ ಪಾಲಿಕೆ ಸದಸ್ಯ ಶಿವಪ್ರಕಾಶ್ ಗುಡಿಸಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ನಂತರ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಚಿಕ್ಕದೊಂದು ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಮನೆಯಿಂದ ಹೊರಹಾಕಿದ ಸೊಸೆಯಂದಿರು:
ಇದ್ದ ಇಬ್ಬರು ಮಕ್ಕಳು ಸಾವಿಗೀಡಾದ ಬಳಿಕ ಮನೆಯಲ್ಲಿದ್ದ ಸೊಸೆಯಂದಿರು ವೃದ್ಧ ದಂಪತಿಯನ್ನು ಕರುಣೆ ಇಲ್ಲದೆ ಮನೆಯಿಂದ ಹೊರದೂಡಿದ್ದಾರೆ. ಈ ಕಾರಣಕ್ಕಾಗಿ ವೃದ್ಧ ದಂಪತಿ ಪಾಲಿಕೆ ಸದಸ್ಯ ಶಿವಪ್ರಕಾಶ್ ಎಂಬುವರ ಬಳಿ ಸಹಾಯ ಹಸ್ತ ಚಾಚಿದ್ದರು.