ದಾವಣಗೆರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ ಮೈಲಾರಿ ಅಲಿಯಾಸ್ ವಗ್ಗ ಮೈಲಾರಿ, ಚನ್ನಗಿರಿ ತಾಲೂಕಿನ ಚಿಕ್ಕಬನ್ನೂರಿನ ಕೃಷ್ಣ ಅಲಿಯಾಸ್ ಖಾದರ್ ಕೃಷ್ಣ, ರಾಮು, ಕುಮಾರ್ ಅಲಿಯಾಸ್ ವಗ್ಗ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಕಳ್ಳತನ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು!
ಜಿಲ್ಲೆಯ ಸಂತೇಬೆನ್ನೂರು, ಮಾಯಕೊಂಡ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮದಲ್ಲಿ ಆರೋಪಿಗಳು ಕಳವು ಮಾಡಿದ್ದಾರೆ. ಅಲ್ಲದೇ, ಮಾಜಿ ಸಂಸದ ಟಿ. ವಿ. ಚಂದ್ರಶೇಖರಯ್ಯ ಅವರ ನಲ್ಕುದುರೆ ಗ್ರಾಮದ ಮನೆಯಲ್ಲಿ ಕೂಡ 2.80 ಲಕ್ಷ ರೂಪಾಯಿ ಮೌಲ್ಯದ 4.6 ಕೆಜಿ ಬೆಳ್ಳಿ ಕಳ್ಳತನವಾಗಿತ್ತು. ಈ ವಸ್ತುಗಳನ್ನು ಕಾಕನೂರು ಗ್ರಾಮದ ಮಾವಿನ ಮರದ ಮೇಲೆ ಇಟ್ಟಿದ್ದರು. ಆಗಾಗ ಬಂದು ಈ ಮರವನ್ನು ಆರೋಪಿಗಳು ನೋಡಿಕೊಂಡು ಹೋಗುತ್ತಿರುವುದರ ಬಗ್ಗೆ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಆರೋಪಿಗಳು ಇಲ್ಲಿಗೆ ಬಂದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದರು.
ಚಿಕ್ಕಮಗಳೂರಿನ ಅಜ್ಜಂಪುರ, ಹೊಳಲ್ಕೆರೆಯಲ್ಲಿ ತಲಾ ಒಂದು ಹಾಗೂ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಮನೆಯಲ್ಲಿ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಆರು ಲಕ್ಷ ರೂಪಾಯಿ ಮೌಲ್ಯದ 120 ಗ್ರಾಂ ಚಿನ್ನಾಭರಣಗಳನ್ನು ದೋಚಲಾಗಿತ್ತು. ವಗ್ಗ ಮೈಲಾರಿ ಮತ್ತು ವಗ್ಗ ಕುಮಾರ್ ಖತರ್ನಾಕ್ ಕಳ್ಳರಾಗಿದ್ದು, ಈ ಹಿಂದೆಯೂ ಕಳವು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದರು. ಜಾಮೀನಿನ ಮೇಲೆ ಹೊರಬಂದು ಮತ್ತೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದರು.