ಉಲ್ಲಾಳ: ಕೋಟೆಪುರ ಸಮುದ್ರ ತೀರದಲ್ಲಿ ತಲೆಗೆ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಯುವಕನ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಉಲ್ಲಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಸಂಬಂಧ ಮೃತನ ಜತೆಗಿದ್ದ ಯುವಕನೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತಲಪಾಡಿ ಸಾಂತ್ಯ ಮಾರುಜಾಗ ನಾರಾಯಣ ಭಂಡಾರಿ ಎಂಬುವರ ಪುತ್ರ ತಿತೇಶ್ ಭಂಡಾರಿ (28) ಹತ್ಯೆಯಾದವರು. ಬುಧವಾರ ಮಧ್ಯಾಹ್ನದ ವೇಳೆ ಅವರ ಮೃತದೇಹ ಕೋಟೆಪುರದ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ತಲೆಯಲ್ಲಿ ಅಲ್ಲಲ್ಲಿ ಗಾಯಗಳಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸಹೋದರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಠಾಣೆಗೆ ಆಗಮಿಸಿದ ನಿತ್ಯಾನಂದ ಭಂಡಾರಿ ಮಂಗಳವಾರ ಮಧ್ಯಾಹ್ನದ ವೇಳೆ ಸಹೋದರನನ್ನು ಯಾರೋ ಹತ್ಯೆ ಮಾಡಿದ್ದಾರೆಂದು ಕನ್ನಡದಲ್ಲಿ ಕರೆಯೊಂದು ಬಂದಿರುವುದನ್ನು ತಿಳಿಸಿದ್ದಾರೆ. ಅದರಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಎಳನೀರು, ಬಂಗಾರಪಲ್ಕೆ ಫಾಲ್ಸ್ ದುರಂತ: ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲು ತೀರ್ಮಾನ!
ತಿತೇಶ್ ಬೋಟಿನ ಕಾಯಕ ನಡೆಸುತ್ತಿದ್ದು, ಇವರ ಜತೆಗಿದ್ದ ರಮೇಶ್ ಎಂಬಾತ ನಾಪತ್ತೆಯಾಗಿದ್ದಾನೆ. ಆತನೇ ಹತ್ಯೆ ನಡೆಸಿ ತಲೆಮರೆಸಿಕೊಂಡಿರುವ ಸಾಧ್ಯತೆಗಳನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹತ್ಯೆಗೀಡಾದ ತಿತೇಶ್ ವಿರುದ್ಧ ತಲಪಾಡಿ ಸೆಲೂನಿನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಾರಂಟ್ ಜಾರಿಯಾಗಿತ್ತು. ತದನಂತರ ತಲಪಾಡಿಯ ತನ್ನ ಮನೆಗೆ ತೆರಳದೆ ತಿತೇಶ್ ಉಳ್ಳಾಲದಲ್ಲಿಯೇ ಇದ್ದರು. ಈ ಬಗ್ಗೆ ಮನೆ ಮಂದಿಗೂ ತಿತೇಶ್ ಮಾಹಿತಿ ನೀಡದೇ ಸಂಪರ್ಕದಲ್ಲೇ ಇರಲಿಲ್ಲ. ಮೃತರು ವಿವಾಹಿತರೂ ಆಗಿದ್ದರು. ಉಳ್ಳಾಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.