ಮಂಗಳೂರು/ದಕ್ಷಿಣಕನ್ನಡ : ಬ್ರಿಟಿಷರಿಗೆ ಕ್ಷಮೆ ಪತ್ರ ಬರೆದ, ಅವರು ಕೊಟ್ಟಿರುವ ಭತ್ಯೆ ಹಣವನ್ನು ಪಡೆದ ಸಾವರ್ಕರ್ ಹೇಗೆ ವೀರರಾಗಲು ಸಾಧ್ಯ ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಪ್ರಶ್ನಿಸಿದರು.
ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರು ಬ್ರಿಟಿಷರ ಹಣ ತಿಂದವರು. ಇದು ದೇಶಕ್ಕೆ ಗೊತ್ತಿದೆ. ಬಿಜೆಪಿಗರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರು ಎಷ್ಟೇ ತಿರುಚಿದರೂ ಜನರು ಸರಿಯಾದ ಸಮಯದಲ್ಲಿ ಸರಿಯಾದ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.
ಆರ್ಎಸ್ಎಸ್ ಹಾಗೂ ಬಿಜೆಪಿಯಿಂದ ಈವರೆಗೆ ಯಾರೂ ದೇಶಕ್ಕಾಗಿ ಹೋರಾಟ ಮಾಡಿ ಸತ್ತವರಿಲ್ಲ. ಬಿಜೆಪಿಯವರ ಕಾರ್ಯಕರ್ತರು ಬಿಡಿ, ಅವರ ಮನೆ ನಾಯಿ ಕೂಡ ಈ ದೇಶಕ್ಕೋಸ್ಕರ ಸತ್ತಿಲ್ಲ. ಮೊದಲು ಇವರು ಇತಿಹಾಸ ಓದಿಕೊಳ್ಳಲಿ. ಇತಿಹಾಸ ಗೊತ್ತಿಲ್ಲದೆ ಮಾತನಾಡಬಾರದು.
ದೆಹಲಿಯಲ್ಲಿರುವವರನ್ನು ಮೆಚ್ಚಿಸಿ ಮಂತ್ರಿಗಿರಿ, ಸಿಎಂ ಆಗಲು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಬಿಟ್ಟು ರಾಜ್ಯದ ಯುವಕರಿಗೆ ಉದ್ಯೋಗ ಕೊಡಿಸುವ, ರೈತರ ಸಮಸ್ಯೆ ಬಗೆಹರಿಸುವ, ಬೆಲೆ ಏರಿಕೆ ಕಡಿಮೆ ಮಾಡುವ, ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಲಿ ಎಂದು ಬಿ ವಿ ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿಂದು 1151 ಮಂದಿಗೆ COVID ದೃಢ: ಸಾವಿನ ಸಂಖ್ಯೆ ಗಣನೀಯ ಇಳಿಕೆ