ಮಂಗಳೂರು: ಪಾನಮತ್ತನಾಗಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಯುವತಿಯೊಬ್ಬಳ ಸಾವಿಗೆ ಕಾರಣವಾದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ, ಅಪರಾಧಿಗೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನಾಲ್ಕನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.
ಹಳೇ ಹುಬ್ಬಳ್ಳಿ ಜಂಗಲೀಪೇಟೆ ನಿವಾಸಿ ಸುಮಿಯ್ ಮೊರಾಬ್(28) ಶಿಕ್ಷೆಗೊಳಗಾದ ಅಪರಾಧಿ. ಈತ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಯುವತಿ ಸಾವಿಗೆ ಕಾರಣವಾದ ಪ್ರಕರಣವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಸಮಗ್ರ ವಿಚಾರಣೆ ನಡೆಸಿ ಅಪರಾಧ ಸಾಬೀತುಪಡಿಸಿದರು. ಬಳಿಕ ತೀರ್ಪು ನೀಡಿ ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 304ಎ (ನಿರ್ಲಕ್ಷ್ಯದ ಚಾಲನೆ) ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5ಸಾವಿರ ರೂ. ದಂಡ, ದಂಡ ಕಟ್ಟಲು ವಿಫಲವಾದಲ್ಲಿ 1ತಿಂಗಳ ಸಜೆ, ಐಪಿಸಿ 279ರಡಿ (ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯ ರೀತಿ ಚಾಲನೆ) 3 ತಿಂಗಳು ಸಾದಾ ಸಜೆ, 1ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಕಾರಾಗೃಹ ಶಿಕ್ಷೆ, ಐಪಿಸಿ 337 (ಸಾದಾ ಗಾಯ)ಅಡಿ 3 ತಿಂಗಳು ಸಜೆ, 500 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದರು.
ಪ್ರಕರಣದ ವಿವರ: 2017 ಫೆ.28ರಂದು ಸಂಜೆ 4:15ರ ಸುಮಾರಿಗೆ ಅಬೂಬಕರ್ ತನ್ನ ಆಟೋರಿಕ್ಷಾದಲ್ಲಿ ಪುತ್ರಿ ಸುಮಯ್ಯ, ಪುತ್ರ ಮುಹಮ್ಮದ್ ಶಾನ್ ಮತ್ತು ಪ್ರಯಾಣಿಕೆ ಅಶ್ವಿನಿ (23) ಜತೆ ಬೆಳ್ತಂಗಡಿಯಿಂದ ಉಜಿರೆಗೆ ತೆರಳುತ್ತಿದ್ದರು. ಈ ಸಂದರ್ಭ ಕಡೂರು - ಬಂಟ್ವಾಳ ಹೆದ್ದಾರಿಯ ಬೆಳ್ತಂಗಡಿ ಎಚ್.ಬಿ. ಪೆಟ್ರೋಲ್ ಬಂಕ್ ಬಳಿ ಟೆಂಪೋವೊಂದು ಇವರ ರಿಕ್ಷಾಕ್ಕೆ ಢಿಕ್ಕಿಯಾಗಿದೆ. ಇದರಿಂದ ರಿಕ್ಷಾ ಪಲ್ಟಿಯಾಗಿ ಬಿದ್ದಿದ್ದು, ಟೆಂಪೋ ಚಾಲಕ ಸುಮಿಯ್ ಮೊರಾಬ್ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದ. ಅಪಘಾತದಿಂದ ಅಶ್ವಿನಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಉಳಿದಂತೆ ಅಬೂಬಕರ್ ಹಾಗೂ ಇಬ್ಬರು ಮಕ್ಕಳು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಕೆಲವು ಗಂಟೆಯ ಬಳಿಕ ಆರೋಪಿ ಸುಮಿಯ್‌ನನ್ನು ಪೊಲೀಸರು ಬಂಧಿಸಿದ್ದರು. ಬೆಳ್ತಂಗಡಿ ವೃತ್ತ ನಿರೀಕ್ಷಕರು ಪ್ರಕರಣದಲ್ಲಿ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.