ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಿರೀಟ ವೇಷಧಾರಿ ಸಂಪಾಜೆ ಶೀನಪ್ಪ ರೈಯವರು ಇಂದು ಬೆಳಗ್ಗೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಸಂಪಾಜೆಯ ಕೀಲಾರಿನ ಮಾದೇಪಾಲು ಎಂಬಲ್ಲಿ 1940ರ ಜೂನ್ 07ರಂದು ಜನಿಸಿದ ಸಂಪಾಜೆ ಶೀನಪ್ಪ ರೈಯವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮುಗಿಸಿ ಯಕ್ಷಗಾನದಲ್ಲಿ ಆಕರ್ಷಿತರಾದವರು.
ಪ್ರಸ್ತುತ ಸುರತ್ಕಲ್ನ ಕಾಟಿಪಳ್ಳದಲ್ಲಿ ಪುತ್ರನೊಂದಿಗೆ ನೆಲೆಸಿದ್ದರು. ಯಕ್ಷಗಾನದ ಗತ್ತಿನ ಕಿರೀಟ ವೇಷ, ಎದುರು ವೇಷಗಳಿಗೆ ಹೆಸರಾಗಿದ್ದ ಅವರ ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ, ಸತ್ಯವ್ರತ, ಕೌರವ, ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು ವೇಷಗಳಿಂದ ಪ್ರಸಿದ್ಧರಾಗಿದ್ದರು. ಶ್ರೀದೇವಿ ಮಹಾತ್ಮೆಯ ರಕ್ತಬೀಜನ ಪಾತ್ರಕ್ಕೆ ಅವರದ್ದೇ ಭಾಷ್ಯ ಬರೆದಿದ್ದು, ಅಪಾರ ಜನಪ್ರಿಯತೆ ಗಳಿಸಿತ್ತು.
ಕಟೀಲು ಮೇಳದಲ್ಲಿ ಹಲವು ದಶಕಗಳ ತಿರುಗಾಟ ನಡೆಸಿದ ಸಂಪಾಜೆ ಶೀನಪ್ಪ ರೈಯವರು ಕುಂಡಾವು, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ತಿರುಗಾಟ ನಡೆಸಿ ಮೂರು ವರ್ಷದ ಹಿಂದೆ ವಯೋಸಹಜ ಅನಾರೋಗ್ಯದಿಂದ ನಿವೃತ್ತರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ, ಪುನಸ್ಕಾರಗಳನ್ನು ಪಡೆದಿರುವ ಸಂಪಾಜೆ ಶೀನಪ್ಪ ರೈಗಳು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.