ಮಂಗಳೂರು: ನಗರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯ್ತು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಕೈ ಜೋಡಿಸುತ್ತೇವೆ ಎಂದು ವಾಗ್ದಾನ ಮಾಡಿದರು.
ನಗರದ ಟಿ.ಎಂ.ಎ.ಪೈ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್ಗಳಲ್ಲಿ ಕಸ ವಿಲೇವಾರಿಯೇ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬರೂ ನಾನು ನನ್ನ ಮನೆ, ಪರಿಸರ ಸ್ವಚ್ಛತೆ ಕಾಯ್ದುಕೊಳ್ಳುತ್ತೇನೆ ಎಂದು ಸಂಕಲ್ಪ ಮಾಡಿಕೊಂಡರೆ ತ್ಯಾಜ್ಯ ನಿಯಂತ್ರಣ ಸುಲಭವಾಗಿ ಮಾಡಬಹುದು. ನಮ್ಮ ನಗರವೂ ಸ್ವಚ್ಛವಾಗುತ್ತದೆ ಎಂದ್ರು.
ಎಲ್ಲಿಯಾದರೂ ಕಸ ಬಿದ್ದರೆ ಅದು ಆ ಪರಿಸರದವರ ಜವಾಬ್ದಾರಿ. ಆದ್ದರಿಂದ ಇತ್ತೀಚೆಗೆ ನಾವು ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಆಂದೋಲನ ಆರಂಭಿಸಿದ್ದೇವೆ. ನಮ್ಮ ಯಾವುದೇ ವೈಯಕ್ತಿಕ ಕೆಲಸವನ್ನು ಹೇಗೆ ಸರ್ಕಾರ ಮಾಡುವುದಿಲ್ಲವೋ ಹಾಗೆಯೇ ನಮ್ಮ ಕಸವನ್ನು ನಾವೇ ವಿಲೇವಾರಿ ಮಾಡಬೇಕು ಎಂದು ಸ್ವಚ್ಛತಾ ಏಕಗಮ್ಯಾನಂದ ಸ್ವಾಮೀಜಿ ಹೇಳಿದರು. ಈ ಸಂದರ್ಭ ಶಾಲಾ ಮಕ್ಕಳಲ್ಲಿ, ಕಾರ್ಯಕ್ರಮಕ್ಕೆ ಹಾಜರಾಗಿರುವವರಿಂದ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಕೈ ಜೋಡಿಸುತ್ತೇವೆ ಎಂದು ವಾಗ್ದಾನ ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರು ಉಪಸ್ಥಿತರಿದ್ದರು.