ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನವಾಗಿದ್ದು, ಇದಕ್ಕೆ ಯಾವುದೇ ಸ್ವಾಮೀಜಿಗಳಿಲ್ಲ. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕುಕ್ಕೆ ದೇವಸ್ಥಾನದ ಸ್ವಾಮೀಜಿಯಲ್ಲ.ಅವರು ಸಂಪುಟ ನರಸಿಂಹ ಮಠದ ಸ್ವಾಮೀಜಿ ಅಷ್ಟೇ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಹೇಳಿದ್ದಾರೆ.
ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ ಸೇರಿದಂತೆ ಹಲವಾರು ಸೇವೆಗಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಸಂಪುಟ ನರಸಿಂಹ ಮಠದಲ್ಲಿ ನಡೆಸಲಾಗುತ್ತಿತ್ತು. ಈ ಸಂಬಂಧ ಇತ್ತೀಚೆಗೆ ಗೊಂದಲಗಳು ತಾರಕಕ್ಕೇರಿದ್ದವು. ಹಾಗಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತ ರಕ್ಷಣಾ ವೇದಿಕೆಯು ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರನ್ನು ಸಂಪುಟ ನರಸಿಂಹ ಮಠಕ್ಕೆ ಕರೆದುಕೊಂಡು ಹೋಗಿ ದೇವಸ್ಥಾನದ ಹೆಸರಿನಲ್ಲಿ ಸರ್ಪ ಸಂಸ್ಕಾರ ಸೇವೆಯನ್ನು ಹೆಚ್ಚಿನ ಹಣ ಪಡೆದು ಮಾಡುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿರುವ ಸಂಪುಟ ನರಸಿಂಹ ಮಠವನ್ನು ಸುಬ್ರಹ್ಮಣ್ಯ ದೇವಸ್ಥಾನದ ಮಠವೆಂದು ತಪ್ಪು ತಿಳಿದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಈ ಘಟನೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.