ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ನವರನ್ನು ಕರೆತಂದು ಚುನಾವಣೆ ಎದುರಿಸುವ ದುರ್ಗತಿ ಬಂದಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಗರು ನಡೆಸುವ ಅಪಪ್ರಚಾರಕ್ಕೆ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ತಕ್ಕ ಉತ್ತರ ಕೊಡುತ್ತಾರೆ. ಮಂಗಳೂರು ನಗರದ ಅಭಿವೃದ್ಧಿಗೆ ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ. ಮಂಗಳೂರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿಯತ್ತ ಕೊಂಡೊಯ್ದಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ ಅವರ ಕಾಲದಲ್ಲಿ ತಂದಿರುವ ಅನುದಾನಗಳಿಗೆ ಇಂದಿನ ಬಿಜೆಪಿ ಶಾಸಕರು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಬಿಜೆಪಿ ಗೆದ್ದ ಬಳಿಕ ಯಾವುದೇ ಹೊಸ ಅನುದಾನ ಬಂದಿಲ್ಲ. ಆದ್ದರಿಂದ ಹಳೆಯ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಿ ತಮ್ಮದೇ ಅನುದಾನ ಎಂದು ಬಿಜೆಪಿಗರು ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಸಮ್ಮಿಶ್ರ ಸರ್ಕಾರವು ಮಂಗಳೂರಿಗೆ 125 ಕೋಟಿ ರೂ. ವಿಶೇಷ ಅನುದಾನ ನೀಡಿತ್ತು. ಫೈನಾನ್ಸ್ ಅಪ್ರೂವ್ ಕೂಡಾ ಆಗಿತ್ತು. ಆದರೆ ಬಿಜೆಪಿ ಸರ್ಕಾರ ಯಾಕೆ ಅದನ್ನು ಮುಂದುವರಿಸಿಲ್ಲ. ನೂರು ದಿನಗಳ ಸಾಧನೆ ಎಂದು ಹೇಳುವ ಸಂಸದ ನಳಿನ್ ಕುಮಾರ್ ಅವರಿಗೆ ಈ ನೂರು ದಿನಗಳಲ್ಲಿ ಇದನ್ನು ಯಾಕೆ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲ. ಹಿಂದಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಯಾವ ರೀತಿಯಲ್ಲಿ ಜನವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು ಎಂದು ಎಲ್ಲರೂ ಅರಿತಿದ್ದಾರೆ. ಆ ಬಳಿಕ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲೇ ಇಲ್ಲ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
ಇದೇ ವೇಳೆ ಅಯೋಧ್ಯೆ ತೀರ್ಪಿನ ಬಗ್ಗೆ ಮಾತನಾಡಿ, ಮಾಧ್ಯಮಗಳಲ್ಲಿ ಅಯೋಧ್ಯೆ ಅವರ ಪಾಲಾಯಿತು, ಇವರ ಪಾಲಾಯಿತು ಎಂದು ಬಿತ್ತರವಾಗುತ್ತಿದೆ. ಇದು ಒಬ್ಬರಿಗೆ ಕೊಟ್ಟ ತೀರ್ಮಾನ ಅಲ್ಲ. ದೇಶಕ್ಕೆ ಕೊಟ್ಟ ತೀರ್ಮಾನ. ಹಾಗಾಗಿ ಇದಕ್ಕೆ ದೇಶದ ಎಲ್ಲಾ ಜನರು ತಲೆ ಬಾಗುತ್ತಾರೆ ಎಂದು ಹೇಳಿದ್ದಾರೆ.