ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಿಂದ ನಾಪತ್ತೆಯಾದ ವ್ಯಕ್ತಿಗೆ ಉತ್ತರ ಭಾರತದಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರಗಾಮಿಗಳಿಗೆ ಯಾವುದೇ ಸಂಪರ್ಕ ಇಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ನವರಾತ್ರಿ ವೇಳೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪದಡಿ ಉತ್ತರಭಾರತದ ವಿಶೇಷ ಪೊಲೀಸ್ ತಂಡ ಆರು ಶಂಕಿತ ಉಗ್ರಗಾಮಿಗಳನ್ನು ಬಂಧಿಸಿತ್ತು. ಅವರಿಗೂ ನೆಕ್ಕಿಲಾಡಿಯಿಂದ ನಾಪತ್ತೆಯಾದ ವ್ಯಕ್ತಿಗೆ ಪರಸ್ಪರ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದರು.
ಉಪ್ಪಿನಂಗಡಿ ಸಮೀಪದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಹಮ್ಮದ್ ರಫೀಕ್ ಖಾನ್ ಎಂಬುವರು ಜುಲೈ 12 ರಂದು ವಾಹನದ ಬಿಡಿಭಾಗಗಳನ್ನು ತರಲು ಬೆಂಗಳೂರಿಗೆ ತೆರಳಿದ್ದರು. ಅಂದೇ ರಫೀಕ್ ನಾಪತ್ತೆಯಾಗಿದ್ದರು. ಜುಲೈ ತಿಂಗಳ 18 ರಂದು ಪತ್ನಿಗೆ ಕೊನೆಯದಾಗಿ ಫೋನ್ ಮಾಡಿದ್ದ ರಫೀಕ್, ಮನೆಗೆ ಹಿಂದಿರುಗುವುದಾಗಿ ಹೇಳಿದ್ದರು.
ಬಳಿಕ ರಫೀಕ್ ಮೊಬೈಲ್ ಸ್ವಿಚ್ಆಫ್ ಆಗಿತ್ತು. ನಂತರ ಇವರ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಬಗ್ಗೆ ರಫೀಕ್ ಖಾನ್ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರದ ಬೆಳವಣಿಗೆಗಳಲ್ಲಿ ಉತ್ತರ ಭಾರತದಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ಜೊತೆಗೆ ರಫೀಕ್ಗೆ ಸಂಪರ್ಕ ಇರುವ ಬಗ್ಗೆ ಕೆಲವು ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು.
ಈ ಬಗ್ಗೆ ಪುತ್ತೂರು ಡಿವೈಎಸ್ಪಿ ಡಾ. ಗಾನಾ. ಪಿ. ಕುಮಾರ್ ಅವರನ್ನು ಸಂಪರ್ಕಿಸಿ ಈಟಿವಿ ಭಾರತ ಮಾಹಿತಿ ಕೇಳಿತ್ತು. ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದ್ದರು. ಇದೀಗ ಸೆ.22ರಂದು ಕಾಣೆಯಾದ ರಫೀಕ್ ಅವರನ್ನು ಪತ್ತೆ ಹಚ್ಚಲಾಗಿದ್ದು, ಇವರು ಪತ್ನಿ ಜೊತೆಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.