ಮಂಗಳೂರು: ಲಾಕ್ಡೌನ್ ನಡುವೆಯೂ 12 ನೃತ್ಯ ವಿದುಷಿಯರಿಂದ ಮಂಗಳೂರಿನ ಮಕ್ಕಿಮನೆ ಕಲಾವೃಂದ ಕೃಷ್ಣ ನೃತ್ಯೋಲ್ಲಾಸ ಎಂಬ ವಿಶಿಷ್ಟ ನೃತ್ಯ ಪ್ರಯೋಗವನ್ನು ಪ್ರಸ್ತುತ ಪಡಿಸಿದೆ.
ಮಕ್ಕಿಮನೆ ಕಲಾವೃಂದ ಫೇಸ್ಬುಕ್, ಯೂಟ್ಯೂಬ್ ಮೂಲಕ ವಿಶೇಷ ಪ್ರತಿಭಾ ಸಂಪನ್ನರಿಗೆ ವೇದಿಕೆಯನ್ನು ಒದಗಿಸಿತ್ತು. ಶಾಸ್ತ್ರೀಯ ನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿರುವ 12 ಮಂದಿ ನೃತ್ಯ ವಿದುಷಿಯರಿಂದ ನಾಟ್ಯ ಪ್ರಯೋಗ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಚಿತ್ರಾಕ್ಷಿ ಎ.ಕೆ. ಸಸಿಹಿತ್ಲು, ಅನುಷಾ ಜೈನ್ ನೆಲ್ಯಾಡಿ, ಶ್ರಾವ್ಯಾ ಕೃಷ್ಣ ಬಜ್ಪೆ, ಚೈತನ್ಯ ಕೋಟೆ ಸುಬ್ರಹ್ಮಣ್ಯ, ಪ್ರಾರ್ಥನಾ ಜೆ.ಹೊಸಬೆಟ್ಟು ಸೇರಿದಂತೆ ಹಲವರು ಭಾಗಿಯಾಗಿದ್ದರು.
ವಿಶೇಷವೆಂದರೆ ಈ ಎಲ್ಲ ನೃತ್ಯ ವಿದುಷಿಯರೂ ಒಂದೇ ವೇದಿಕೆಯ ನೃತ್ಯ ಮಾಡದೇ ಅವರಿರುವ ಸ್ಥಳದಲ್ಲೇ ನೃತ್ಯ ಮಾಡಿದ್ದಾರೆ. ಈ ನೃತ್ಯ ಪ್ರಯೋಗವನ್ನು ವಿಡಿಯೋದಲ್ಲಿ ದಾಖಲಿಸಿ ಬಳಿಕ ಅದನ್ನು ಸಂಕಲನ ಮಾಡಲಾಗಿದೆ.
ಈ ಎಲ್ಲ ನೃತ್ಯಗಾರ್ತಿಯರು "ಸ್ವಾಗತಂ ಕೃಷ್ಣ, ಶರಣಾಗತಂ ಕೃಷ್ಣ" ಎಂಬ ಹಾಡಿಗೆ ಅವರಿರುವ ಸ್ಥಳದಲ್ಲೇ ನೃತ್ಯ ಪ್ರಯೋಗ ಮಾಡಿದ್ದಾರೆ. ಈ ಕಲಾವಿದೆಯರ ನೃತ್ಯೋಲ್ಲಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಲ್ಲದೇ ನೃತ್ಯ ರಸಿಕರು ಲಾಕ್ ಡೌನ್ ನಿಂದ ವೇದಿಕೆಯ ಮೂಲಕ ತಮ್ಮ ಮೆಚ್ಚುಗೆಯ ನೃತ್ಯ ವಿದುಷಿಯರ ನಾಟ್ಯವನ್ನು ನೋಡಲಾಗದಿರುವುದರಿಂದ ಯೂಟ್ಯೂಬ್ ಮೂಲಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.