ಮಂಗಳೂರು: ''ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಬರಬೇಕಿದೆ. ಏಕರೂಪದ ಕಾನೂನು ಬೇಡ ಎನ್ನುವವರು ಷರಿಯತ್ ಕಾನೂನು ಬರಲಿ ಅಂತ ಯಾಕೆ ಹೇಳಲ್ಲ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಂದು ನಡೆದ ದ.ಕ. ಜಿಲ್ಲೆಯ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ''ಕೈ ಕಡಿದರೆ ಕೈ, ತಲೆ ಕಡಿದರೆ ತಲೆ ಕಡಿಯುವ ಷರಿಯತ್ಕಾನೂನು ತನ್ನಿ ಎನ್ನಲ್ಲ. ಯಾಕೆ ಇವರು ಷರಿಯತ್ ಯಥಾವತ್ತಾಗಿ ಜಾರಿಗೆ ಬರಲು ಹೇಳುವುದಿಲ್ಲ. ಮುಸ್ಲಿಮರಿಗೆ ಇಲ್ಲಿನ ಕಾನೂನು, ಸವಲತ್ತು ಬೇಕು, ಷರಿಯತ್ ಬೇಡ. ಮುಸ್ಲಿಂ ಮಹಿಳೆಯರು ಮುಸುಕು ಹಾಕಿದ್ದೇ ಇವರ ಕೆಟ್ಟ ದೃಷ್ಟಿ ಬೀಳದಿರಲೆಂದು. ಅವರಲ್ಲಿ ಆ ಪರಿ ಕೆಟ್ಟತನ ಇದ್ದುದಕ್ಕೆ ಷರಿಯಾ ಕಾನೂನು ತರಲಾಗಿತ್ತು. ದೇಶದಲ್ಲಿ ಅವರಿಗೊಂದು, ಇವರಿಗೊಂದು ಕಾನೂನು ಅನ್ನುವುದು ಬೇಕಿಲ್ಲ. ಎಲ್ಲರಿಗೂ ಒಂದೇ ರೀತಿಯ ಏಕರೂಪದ ಕಾನೂನು ಜಾರಿಗೆ ತರಬೇಕಾಗಿದೆ'' ಎಂದು ಅಭಿಪ್ರಾಯ ಪಟ್ಟರು.
''ನಾವು ನಂಬಿರುವ ಸಿದ್ಧಾಂತಕ್ಕೆ ಎಂದೂ ಸೋಲಾಗಲು ಸಾಧ್ಯವಿಲ್ಲ. ಸಿದ್ಧಾಂತಕ್ಕೆ ಸೋಲಿಲ್ಲ, ಚುನಾವಣೆಗೆ ಮಾತ್ರ ಸೋಲಾಗಬಹುದು. ನಾವು ಸಿದ್ಧಾಂತ ನಂಬಿಕೊಂಡು ಬಂದವರು, ಅದಕ್ಕೆ ಬದ್ಧರಾದವರು'' ಎಂದು ವಿಧಾನಸಭೆ ಚುನಾವಣೆ ಸೋಲನ್ನು ವಿಶ್ಲೇಷಿಸಿದರು. ಮೋದಿ ಅರ್ಥ ಮಾಡಲು ಹಿಂದಿನ ಹಗರಣಗಳ ಸರ್ಕಾರ ನೆನಪಿಸಬೇಕು. ಆಕಾಶ, ಭೂಮಿ, ಪಾತಾಳ ಮೂರರಲ್ಲೂ ಹಗರಣ ಮಾಡಿದ್ದು, ಕಾಂಗ್ರೆಸ್ ಸರ್ಕಾರ'' ಎಂದು ಅವರು ಟೀಕಿಸಿದರು.
''ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ನಮ್ಮ ಸೋಲು ಕಾರಣ. ಹಾಗಾಗಿ ನಾನು ನಿಮ್ಮೆಲ್ಲರಲ್ಲಿ ಕ್ಷಮೆ ಯಾಚನೆ ಮಾಡ್ತೇನೆ. ನಾವು ಸೋತಿದ್ದೇವೆ, ಚುನಾವಣೆಯಲ್ಲಿ ಮಾತ್ರ ಸೋಲು. ಆದರೆ, ಸಿದ್ದಾಂತದಲ್ಲಿ ನಾವು ಸೋತಿಲ್ಲ, ಅದು ಯಾವತ್ತೂ ಇರುತ್ತೆ. ಡಿಕೆಶಿ ಉಚಿತ, ನಿಶ್ವಿತ ಮತ್ತು ಖಚಿತ ಅಂತ ಹೇಳಿದರು. ಸಿ.ಟಿ.ರವಿ ನಿಮ್ಮ ಹೆಂಡ್ತೀಗೂ ಫ್ರೀ, ಶೋಭಕ್ಕ ನಿಮಗೂ ಫ್ರೀ ಅಂದ್ರು. ಅಹಂಕಾರದ ಮಾತು, ಸದ್ಯ ಕಂಡಿಷನ್ ಯಾಕೆ ಹಾಕ್ತಿದಾರೆ'' ಎಂದು ಪ್ರಶ್ನಿಸಿದರು.
''ತುಕಾಡೆ ಗ್ಯಾಂಗ್ಗಳಿಗೆ ಕಾಂಗ್ರೆಸ್ ಬೆಂಬಲ ಕೊಡ್ತಾ ಇದೆ. ನೀತಿ ಹಾಗೂ ನೀಯತ್ತ ಇಲ್ಲದ ನೇತೃತ್ವ ಹಾನಿಕಾರಕ. ಕಾಂಗ್ರೆಸ್ಗೆ ನಿಯತ್ತು ಮತ್ತು ನೀತಿ ಎರಡೂ ಇಲ್ಲ.ಕಾಂಗ್ರೆಸ್ ಮಾಯಾ ಯುದ್ದದಲ್ಲಿ ತಾತ್ಕಾಲಿಕ ಗೆಲುವು ಪಡೆದಿದೆ. ಅವರ ಮಾಯಾ ಯುದ್ಧದಲ್ಲಿ ನಾವು ಅಧಿಕಾರ ಕಳೆದುಕೊಂಡಿದ್ದೇವೆ. 2024ರಲ್ಲಿ ಮೈ ಮರೆತರೆ ನಾವು ದೇಶ ಕಳೆದುಕೊಳ್ತೀವಿ. ಹಾಗಾಗಿ ಜನರಿಗೆ ಈ ಮಾಯ ಯುದ್ದವನ್ನ ಅರ್ಥ ಮಾಡಿಸಬೇಕಿದೆ'' ಎಂದರು.
ಸಭೆಯಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ''ಈ ಸರ್ಕಾರ ಪ್ರಾರಂಭದ ಲಕ್ಷಣ ನೋಡಿದರೆ, ಅವರು ಯಾರ ಮಾತು ಕೇಳೋ ಹಾಗಿಲ್ಲ. ಅವರು ಮಾಡಿದ್ದೇ ಮೊದಲು ಅನ್ನೋ ಧೋರಣೆಯಲ್ಲಿ ಇದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆರಂಭ ಆಗಿದೆ. ಆದರೆ, ಯಾಕಾದ್ರೂ ಈ ಸರ್ಕಾರ ಬಂತೋ ಅನ್ನೋ ಹಾಗಾಗಿದೆ. ಸರ್ಕಾರ ವೈಫಲ್ಯ ಮುಚ್ಚಿ ಹಾಕಿ ಗೊಂದಲ ಸೃಷ್ಟಿಸುವ ಕೆಲಸದಲ್ಲಿದೆ'' ಎಂದರು.
''ಅಭಿವೃದ್ಧಿ ಬಿಟ್ಟು ಕೇವಲ ಗ್ಯಾರಂಟಿ ಗೊಂದಲದಲ್ಲಿದೆ. ಚುನಾವಣೆ ಪೂರ್ವ ಗ್ಯಾರಂಟಿ ಅದೇ ರೀತಿ ಜಾರಿಗೆ ತನ್ನಿ. ಸರ್ವರ್ ಡೌನ್ ಆದ್ರೆ ಕೇಂದ್ರ ಹ್ಯಾಕ್ ಮಾಡಿದೆ ಅನ್ನೋ ಕೀಳು ಮಟ್ಟಕ್ಕೆ ಹೋಗ್ತಾರೆ. ಇದು ಒಬ್ಬ ಮಂತ್ರಿಯ ಭೌದ್ದಿಕ ದಿವಾಳಿತನ ಇದು. ಮೊದಲ ಕ್ಯಾಬಿನೆಟ್ ನಲ್ಲಿ ಸರ್ವರ್ ಡೌನ್ ಬಗ್ಗೆ ಗೊತ್ತಿರಲಿಲ್ಬಾ? ಇಷ್ಟೊಂದು ಅರ್ಜಿ ಸಲ್ಲಿಸೋವಾಗ ಸರ್ವರ್ ಬಗ್ಗೆ ನಿಮಗೆ ಗೊತ್ತಿಲ್ವಾ?'' ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆ- ಕಾಗೇರಿ: ''ಕಾಂಗ್ರೆಸ್ ಕಾಲದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಪ್ರಧಾನಿ ಮೋದಿಯವರ ಅವಧಿಯಲ್ಲಿ ಅಂಥದ್ದು ಆಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ, ದ್ರೋಹ, ಅನ್ಯಾಯವನ್ನ ಮೋದಿ ಸರಿ ಮಾಡ್ತಿದಾರೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಈಗ ರಾಜಕೀಯ ಮಾಡ್ತಿದೆ. ಶಿಕ್ಷಣದಲ್ಲಿ ಶಿವಾಜಿಯ ಬಗ್ಗೆ ಕಲಿಸಿ ಅಂತ ನಾವು ಹೇಳಿದೆವು. ಆದರೆ ಇದನ್ನ ಸಿದ್ದರಾಮಯ್ಯರಿಗೆ ತಡೆದುಕೊಳ್ಳಲು ಆಗಲಿಲ್ಲ. ಪರಿಣಾಮ ಅವರು ಎಡಪಂಥೀಯರ ಕೈಗೊಂಬೆಯಾದ್ರು. ಗುಲಾಮಿ ಮಾನಸಿಕತೆ ಹಾಗೂ ಎಡಪಂಥೀಯ ಚಿಂತನೆಗಳನ್ನು ತುಂಬಿಸಿದ್ರು. ಸದ್ಯ ರೋಹಿತ್ ಚಕ್ರತೀರ್ಥ ಪುಸ್ತಕ ಜಾರಿಯಲ್ಲಿ ಇದೆ. ಆದರೆ, ಸರ್ಕಾರ ಬಂದ ಕೆಲವೇ ದಿನಗಳಲ್ಲಿ ರಾಜಕೀಯ ಉದ್ದೇಶ ಈಡೇರಿಸಿದ್ದಾರೆ. ದುರಾಡಳಿತದ ಮೂಲಕ ಪಠ್ಯ ಪರಿಷ್ಕರಣೆ ಮಾಡಿದ್ದಾರೆ. ಎಡಪಂಥೀಯರನ್ನ ತೃಪ್ತಿಪಡಿಸಲು ಕಾಂಗ್ರೆಸ್ ಇದನ್ನ ಮಾಡಿರೋದು ಅಕ್ಷಮ್ಯ ಅಪರಾಧ'' ಎಂದರು.
''ಮಧುಬಂಗಾರಪ್ಪ ಮಂತ್ರಿಯಾಗಿ ಸರಿಯಾಗಿ ತಿಂಗಳಾಗಿಲ್ಲ. ಎಲ್ಲಿ ಯಾವ ಪಠ್ಯ ಇದೆ ಅಂತ ಇನ್ನೂ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಹೇಳಬೇಕು, ಕಿತ್ತು ಹಾಕಿದ ಪಾಠಗಳಲ್ಲಿ ಏನು ದೋಷ ಇದೆ ಅಂತ. ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತಿಯ ಅಮರ ಪುತ್ರರು ಪಠ್ಯ ತೆಗೆದಿದ್ದಾರೆ. ಅವರು ರಾಜ್ ಗುರು, ಭಗತ್ ಸಿಂಗ್, ಸುಖದೇವ್ ಬಗ್ಗೆ ಬರೆದಿದ್ದಾರೆ. ಈ ಪಾಠದಲ್ಲಿ ತೆಗೆದು ಹಾಕುವ ಒಂದು ಶಬ್ದ ಇಲ್ಲ. ಲೇಖಕರು ಇವರಿಗೆ ಅಪಥ್ಯ ಎಂಬ ಕಾರಣಕ್ಕೆ ತೆಗೆದು ಹಾಕಿದ್ದಾರೆ. ಲೇಖಕರು ಅಪಥ್ಯ ಅಂತ ಲೇಖನಗಳನ್ನು ತೆಗೆದಿರೋದು ತಪ್ಪು. ಈ ಕ್ಷುಲ್ಲಕ ಪ್ರಯತ್ನವನ್ನ ನಾವು ಖಂಡಿಸಬೇಕಿದೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹಳೆಯ ದಿನಗಳನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ: ಇದು % ಸರ್ಕಾರ ಎಂದು ಹೆಚ್ಡಿಕೆ ಆರೋಪ