ಕಡಬ: ಅನಧಿಕೃತ ಎಲ್ಲ ಅಂಗಡಿಗಳನ್ನು ತೆರವುಗೊಳಿಸದೇ ನನ್ನ ಅಂಗಡಿ ಮಾತ್ರ ತೆರವುಗೊಳಿಸಿದರೇ, ತಾಲೂಕು ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಂಗಡಿ ಮಾಲೀಕ ಸಂದೀಪ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಬಿಳಿನೆಲೆಯ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಅನಧಿಕೃತ ಅಂಗಡಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ತರಕಾರಿ ಅಂಗಡಿ ತೆರೆದಿದ್ದೇನೆ. ಕೆಲವರು ರಾಜಕೀಯ ವ್ಯಕ್ತಿಗಳ ಬೆಂಬಲ ಪಡೆದು, ನನ್ನ ಅಂಗಡಿ ತೆರವು ಮಾಡಬೇಕೆಂದು ಹಠ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಆದರೆ, ಇದೇ ಪ್ರದೇಶದಲ್ಲಿ ಹಲವಾರು ಅನಧಿಕೃತ ಅಂಗಡಿಗಳಿವೆ. ಅವುಗಳನ್ನು ತೆರವು ಮಾಡಲು ಯಾರೂ ಮುಂದಾಗಲ್ಲ. ವಿಕಲಚೇತನನಾದ ನನ್ನ ಗುರಿಯಾಗಿಸಿಕೊಂಡು ಅಂಗಡಿ ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಅಂಗಡಿ ತೆರವುಗೊಳಿಸಿದರೇ ಕಡಬ ತಾಲೂಕು ಕಚೇರಿ ಮುಂದೆಯೇ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಅಂಗಡಿ ಮಾಲೀಕ ಸಂದೀಪ್ ಹೇಳಿದರು.