ಬೆಳ್ತಂಗಡಿ : "ಜಿಲ್ಲೆಯ ಪೊಲೀಸರು ಯೋಧರಂತೆ ಕಾರ್ಯನಿರ್ವಹಿಸಿದರು. ಸೂಕ್ತ ಸಮಯದಲ್ಲಿ ತನಿಖೆ ನಡೆಸಿ ಪ್ರಕರಣ ಸುಖಾಂತ್ಯಗೊಳ್ಳುವಂತೆ ಮಾಡಿದರು. ಅವರು ಊಟ, ನಿದ್ದೆ ಬಿಟ್ಟು ಕಾರ್ಯನಿರ್ವಹಿಸಿದ ಫಲವಾಗಿ ಮೊಮ್ಮಗ ಅನುಭವ್ ಸುರಕ್ಷಿತವಾಗಿ ಮನೆಗೆ ವಾಪಸ್ ಬರುವಂತಾಯಿತು'' ಎಂದು ಅಪಹರಣಕ್ಕೊಳಗಾಗಿ ಮನೆಗೆ ಮರಳಿದ ಅನುಭವ್ ಅಜ್ಜ ಹೇಳಿದ್ರು.
ಬೆಳ್ತಂಗಡಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಎಸ್ ಐ ನಂದಕುಮಾರ್ ಅವರು ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ, ನಮ್ಮ ಮಗುವನ್ನು ರಕ್ಷಿಸಿದರು. ನನ್ನ ಸ್ನೇಹಿತನ ಪುತ್ರ ಅಜಯ್ ಶೆಟ್ಟಿ ಅವರೂ ಸಹಕಾರ ನೀಡಿದರು. ಒಟ್ಟಿನಲ್ಲಿ ದೇವರ ರೀತಿಯಲ್ಲಿ ಪೊಲೀಸರು ನೆರವಾದರು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಇಂತಹ ಪ್ರಕರಣ ಎಲ್ಲಿಯೂ ನಡೆಯಬಾರದು ಎಂದು ಅನುಭವ್ ಅಜ್ಜ ಎ.ಕೆ. ಶಿವನ್ ಹೇಳಿದರು.
ನಾನು ನೇವಿಯಲ್ಲಿದ್ದು 17 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಹಲವು ಸವಾಲುಗಳನ್ನು ನಿಭಾಯಿಸಿದ್ದೆ. ಆದರೆ, ಅಪಹರಣ ನಿಜಕ್ಕೂ ಆಘಾತ ತಂದಿತ್ತು. ಹೊಸ ಸವಾಲಿನಂತೆ ಕಂಡುಬಂತು. ಆದರೆ, ಪೊಲೀಸರು ರಾತ್ರಿ ಹಗಲೆನ್ನದೆ ಸತತ ಪರಿಶ್ರಮಪಟ್ಟು ಮೊಮ್ಮಗ ಸುರಕ್ಷಿತವಾಗಿ ಮನೆ ಸೇರುವಂತೆ ಮಾಡಿದ್ದಾರೆ. ಅದೇ ರೀತಿ ಸ್ಥಳೀಯರು, ಊರಿನ ಗಣ್ಯರೂ ಸಹಕಾರ ನೀಡಿದ್ದಾರೆ ಅವರಿಗೂ ಆಭಾರಿ ಎಂದರು.
ಹಣಕ್ಕೆ ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಲಿ : ಅನುಭವ್ ತಂದೆ ಬಿಜೋಯ್ ಮಾತನಾಡಿ, ವ್ಯವಹಾರದಲ್ಲಿ ಯಾರಿಗೂ ಹಣ ನೀಡಲು ಬಾಕಿ ಉಳಿದಿಲ್ಲ. ಒಂದು ವೇಳೆ ಯಾರಿಗಾದ್ರೂ ಹಣ ನೀಡಲು ಬಾಕಿಯಿದ್ದರೆ ಒಂದು ತಿಂಗಳೊಳಗೆ ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಬಹುದು. ದಾಖಲೆ ನೀಡಿದಲ್ಲಿ ಹಣ ಪಾವತಿಸಲು ಸಿದ್ಧ. ನಮಗೆ ಕೆಲವರು ಹಣ ಕೊಡಬೇಕಿದೆ. ವೈಯಕ್ತಿಕವಾಗಿ ಯಾರೊಂದಿಗೂ ದ್ವೇಷವಿಲ್ಲ ಎಂದಿದ್ದಾರೆ.
ಬಿಟ್ ಕಾಯಿನ್ ವ್ಯವಹಾರವಿಲ್ಲ : ಈ ಹಿಂದೆ ಬಿಟ್ ಕಾಯಿನ್ ಆರಂಭವಾದ ಸಂದರ್ಭ ಬಿಟ್ ಕಾಯಿನ್ ವ್ಯವಹಾರದಲ್ಲಿದ್ದೆ. ಆದರೆ, ಒಂದು ಬಾರಿ ಭಾರತದಲ್ಲಿ ಬಿಟ್ ಕಾಯಿನ್ ನಿಷೇಧಿಸಿದ ವೇಳೆ ಎಲ್ಲವನ್ನೂ ಮಾರಾಟ ಮಾಡಿದ್ದೇನೆ. ಈಗ ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿಲ್ಲ. ಈಗ ಮತ್ತೆ ಬಿಟ್ ಕಾಯಿನ್ ಭಾರತದಲ್ಲಿ ಚಲಾವಣೆಗೆ ಬಂದಿದ್ದು, ಅದರ ಮೌಲ್ಯ ಹೆಚ್ಚಿದೆ. ಆದರೆ, ನನ್ನ ಬಳಿ ಬಿಟ್ ಕಾಯಿನ್ ಇಲ್ಲ ಎಂದು ತಿಳಿಸಿದ್ದಾರೆ.
ಆಘಾತದಿಂದ ಚೇತರಿಸಿಕೊಂಡಿಲ್ಲ : ಅನುಭವ್ ತಾಯಿ ಸರಿತಾ ಮಾತನಾಡಿ, ಮೊನ್ನೆ ನಡೆದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಕಣ್ಣ ಮುಂದೆಯೇ ಮಗುವನ್ನು ಕರೆದೊಯ್ದಿರುವುದು ಆಘಾತ ಉಂಟು ಮಾಡಿತ್ತು. ಈಗಲೂ ಮಗುವನ್ನು ಗೇಟಿನಿಂದ ಹೊರಗೆ ಬಿಡಲು ಹೆದರುವಂತಾಗಿದೆ. ಪೋಷಕರು ತಮ್ಮ ತಮ್ಮ ಮಕ್ಕಳ ಎಚ್ಚರ ವಹಿಸಬೇಕಿದೆ ಎಂದರು.
ಹೊಸ ಬಟ್ಟೆ ಕೊಡಿಸೋದಾಗಿ ಹೇಳಿದ್ರು : ಅಪಹರಣಗೊಂಡ ಬಾಲಕ ಅನುಭವ್ ಮಾತನಾಡಿ, ಕೋಲಾರಕ್ಕೆ ಕರೆದುಕೊಂಡು ಹೋಗಿ ಮನೆಯಲ್ಲಿಟ್ಟಿದ್ದರು. ಮರುದಿನ ಹೊಸ ಬಟ್ಟೆ ಕೊಡಿಸೋದಾಗಿ ಹೇಳಿದ್ರು. ರಾತ್ರಿ ನಾನು ಮಲಗಿದ್ದೆ, ಎಚ್ಚರ ಆಗುವ ಸಂದರ್ಭ ಪೊಲೀಸರು ನನ್ನನ್ನು ಹಿಡಿದುಕೊಂಡಿದ್ದರು ಎಂದರು. ಈ ವೇಳೆ ಉಜಿರೆಯ ರವಿ ಚಕಿತ್ತಾಯ, ಬಿಜೋಯ್ ಅವರ ಸ್ನೇಹಿತ ರಾಜು ಉಪಸ್ಥಿತರಿದ್ದರು.
ಇದನ್ನೂ ಓದಿ:3ದಿನಗಳ ಬಳಿಕ ಮಡಿಲು ಸೇರಿದ ಮಗ: ಕರಾವಳಿಯಿಂದ ಬಯಲು ಸೀಮೆವರೆಗಿನ ಕಾರ್ಯಾಚರಣೆ ಹೀಗಿತ್ತು..!