ಮಂಗಳೂರು : ರೌಡಿಗಳ ಅಟ್ಟಹಾಸದಿಂದ ದ.ಕ. ಜಿಲ್ಲೆಯ ಗೌರವ ಹಾಗೂ ಸಂಸ್ಕೃತಿಗೆ ಕಪ್ಪುಚುಕ್ಕೆ ಉಂಟಾಗುತ್ತಿದೆ. ಕಾನೂನು ಹಾಗೂ ಪೊಲೀಸ್ ಇಲಾಖೆಯ ಭಯವಿಲ್ಲದೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಆಡಳಿತ ಪಕ್ಷದ ರಾಜಕೀಯ ಒತ್ತಡದಿಂದ ಪೊಲೀಸ್ ಇಲಾಖೆ ನಿಸ್ಸಹಾಯಕವಾಗಿದೆ ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ರಾಜಕೀಯ ವ್ಯಕ್ತಿಗಳಿಗೆ ಗೌರವ ಕೊಡುವುದಲ್ಲ, ಕಾನೂನು ಪಾಲಿಸಬೇಕು. ಸಮಾಜದಲ್ಲಿ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ, ಅಮಾನುಷವಾಗಿ ಹಲ್ಲೆ ಮಾಡಿದಲ್ಲಿ ಕಠಿಣ ಶಿಕ್ಷೆ ವಿಧಿಸುವುದು ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಜವಾಬ್ದಾರಿ. ಪೊಲೀಸ್ ಇಲಾಖೆ ಈ ಸಂಬಂಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದರು.
ಇತ್ತೀಚೆಗೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಿರುವ ವಾಹನದ ಮೇಲೆ ದಾಳಿ ನಡೆಸಿ ಪೊಲೀಸರ ಮುಂದೆಯೇ ದುಷ್ಕರ್ಮಿಗಳು ಹಲ್ಲೆ ನಡೆಸುತ್ತಾರೆಂದರೆ, ಕಾನೂನು ಸುವ್ಯವಸ್ಥೆ ಎತ್ತ ಕಡೆ ಹೋಗುತ್ತಿದೆ ಎಂದು ತಿಳಿಯ ಬೇಕಾಗುತ್ತದೆ.
ಪೊಲೀಸ್ ಇಲಾಖೆ ತಮ್ಮ ಲಾಠಿಯನ್ನು ಮೌನವಾಗಿರಿಸಿದರೆ, ಪ್ರತಿಯೊಬ್ಬರೂ ಲಾಠಿ ಹಿಡಿದುಕೊಂಡು ತಿರುಗಾಡುವ ಪರಿಸ್ಥಿತಿ ಉಂಟಾಗುತ್ತದೆ. ಹಿಂದೆ ಈ ರೀತಿಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಾಗ ಸುಮೋಟೊ ಕೇಸ್ ದಾಖಲಿಸುವ ಸ್ಥಿತಿ ಜಿಲ್ಲೆಯಲ್ಲಿತ್ತು. ಆದರೆ, ಮೊನ್ನೆ ಯಾಕೆ ಈ ಕೆಲಸ ಆಗಿಲ್ಲ? ಯಾರ ಒತ್ತಡ ಇತ್ತು? ಎಂದು ಪ್ರಶ್ನಿಸಿದರು.
ಈ ರೀತಿ ದಾಳಿ ಮಾಡುವವರು ಸಮಾಜಘಾತುಕ ಶಕ್ತಿಗಳು. ನಿಜವಾದ ದೇಶದ್ರೋಹಿಗಳೆಂದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವವರು. ಪೊಲೀಸ್ ಇಲಾಖೆ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಅಸಹಾಯಕತೆ ತೋರಿದರೆ ದ.ಕ. ಜಿಲ್ಲೆಯ ಅಭಿವೃದ್ಧಿ ಕುಠಿತವಾಗಲಿದೆ. ಯಾವ ಇಲಾಖೆ ಸಡಿಲವಾದರೂ ಪೊಲೀಸ್ ಇಲಾಖೆ ಸಡಿಲವಾಗಬಾರದು.
ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಪೂರ್ಣ ಪುನಶ್ಚೇತನ ನೀಡುವ ಕಾರ್ಯ ಆಗಬೇಕು. ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಈ ಬಗ್ಗೆ ಸಿಎಂ ಹಾಗೂ ರಾಜ್ಯ ಗೃಹ ಸಚಿವರ ಗಮನಕ್ಕೂ ತರಲಾಗುತ್ತದೆ ಎಂದು ಖಾದರ್ ಹೇಳಿದರು.
ಹಾನಗಲ್- ಸಿಂದಗಿ ಎರಡೂ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ : ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ರಾಜ್ಯದಲ್ಲಿ ಸಾಧ್ಯವಿಲ್ಲ ಎಂದು ಅಲ್ಲಿನ ಮತದಾರರು ತೋರಿಸಿ ಕೊಡಲಿದ್ದಾರೆ.
ಇದು ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಸ್ವಾಭಿಮಾನದ, ಗೌರವದ ಚುನಾವಣೆ ಆಗಲಿದೆ. ಸಮಾಜ ಕಟ್ಟಲು, ದೇಶ ಕಟ್ಟಲು ಕಾಂಗ್ರೆಸ್ ಅಗತ್ಯ ಎಂದು ಪ್ರತಿಯೊಬ್ಬರಿಗೂ ಈಗ ಅರ್ಥವಾಗಿದೆ ಎಂದು ಶಾಸಕ ಖಾದರ್ ಹೇಳಿದರು.