ಮಂಗಳೂರು: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ ಅವರು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಅವರು ಪಕ್ಷದ ಸಭೆಯನ್ನು ನೋಡಿಕೊಳ್ಳಲಿ. ಅಲ್ಲಿಯ ಸಮಸ್ಯೆಯನ್ನು ಬಗೆಹರಿಸಲಿ. ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುವುದು ಬೇಡ ಎಂದು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಕುಟುಕಿದ್ದಾರೆ.
ಮಂಗಳೂರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರು ಮುಖ್ಯಮಂತ್ರಿಗಳಿಗೆ ಸಹಕಾರವನ್ನು ಕೊಟ್ಟಿದ್ದಾರೆ. ಸಹಕಾರ ಕೊಟ್ಟಿಲ್ಲ ಅಂತಾ ಮುಖ್ಯಮಂತ್ರಿಗಳಾಗಲಿ, ದೇವೇಗೌಡರಾಗಲಿ ಹೇಳಿಲ್ಲ. ನಮ್ಮ ನಾಯಕರುಗಳಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ್ ಅವರು ಸಿಎಂಗೆ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಜೆಹೆಚ್‌ಡಬ್ಲ್ಯೂ ಸಂಸ್ಥೆಗೆ ಕಡಿಮೆ ದರಕ್ಕೆ ಭೂಮಿಯನ್ನು ನೀಡಿದ್ದಾರೆಂದು ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಖಾದರ್, ಯಾವುದೇ ರೀತಿಯಲ್ಲೂ ಯಾರಿಗೂ ನಿಯಮ ಬಿಟ್ಟು ಕಡಿಮೆ ದರದಲ್ಲಿ ಭೂಮಿ ಕೊಟ್ಟಿಲ್ಲ. ಹತ್ತು ವರ್ಷಗಳ ಹಿಂದೆ ಮಾಡಿರುವ ನಿಯಮದಂತೆ ಅವರಿಗೆ ಭೂಮಿಯನ್ನು ನೀಡಲಾಗಿದೆ. ಉದ್ಯೋಗಾವಕಾಶ ಸೃಷ್ಟಿಯಾಗುವ ಕಾರಣಕ್ಕೋಸ್ಕರ ಹಲವು ರಾಜ್ಯಗಳು ಕೈಗಾರಿಕೆಗಳಿಗೆ ಉಚಿತವಾಗಿಯೇ ಭೂಮಿ ನೀಡುತ್ತದೆ. ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರತಿಪಕ್ಷ ಮುಖಂಡರಾಗಿ ಆರೋಪ ಮಾಡುವ ಮುನ್ನ ತಿಳಿದು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ಸರಕಾರ ಹಣ ಮಾಡುತ್ತಿದೆ ಎಂಬ ಕೋಟಾ ಶ್ರೀನಿವಾಸ ಪೂಜಾರಿಯವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಸಚಿವರು, ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಲಿ. ವಿಧಾನಸಭೆಯಲ್ಲಿ ಹಕ್ಕು ಚೀಟಿಯನ್ನು ಮಂಡಿಸಲಿ. ಕಲಾಪ ನಡೆಯುವ ವೇಳೆ ಈ ಬಗ್ಗೆ ಮೌನ ಮುರಿಯಲಿ ಎಂದು ಆಗ್ರಹಿಸಿದರು.