ದಕ್ಷಣ ಕನ್ನಡ/ಚಿತ್ರದುರ್ಗ: ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಾಜೆಯಲ್ಲಿ ಪ್ರೇಮ ವೈಫಲ್ಯದಿಂದ ಸಚಿನ್ (24) ಎಂಬಾತ ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದೆಡೆ ಅಜ್ಜ ಮೊಬೈಲ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುಕ ಯಶವಂತ್(20) ಉಸಿರು ಚೆಲ್ಲಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ಸಂಭವಿಸಿದೆ.
ಘಟನೆ 1: ಬಂಟ್ವಾಳದ ಇಲೆಕ್ಟ್ರಿಕಲ್ ಸಂಸ್ಥೆಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸಚಿನ್ ಚೀಟಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅ.18 ರಂದು ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಸಂಬಂಧಿಕರು ಹುಡುಕಲು ಶುರು ಮಾಡಿದ್ದರು. ಪೋನ್ ಮಾಡಿದಾಗ ರಿಂಗ್ ಆಗುತ್ತಿತ್ತು, ಆದರೆ, ರಿಸೀವ್ ಮಾಡುತ್ತಿರಲಿಲ್ಲ. ಕಾಮಾಜೆಯ ಮಾವನ ಮನೆಯರವಲ್ಲಿಯೂ ವಿಚಾರಿಸಲಾಗಿತ್ತು. ಆದರೆ, ಬೆಳಗ್ಗೆ ಮಿತ್ತಕೋಡಿಯ ಮೈದಾನದ ಬಳಿ ಈತನ ಸ್ಕೂಟರ್ ಪತ್ತೆಯಾಗಿತ್ತು.
ಪೋನ್ ಮಾಡಿದಾಗ ಅಲ್ಲೇ ಸಮೀಪದ ಗುಡ್ಡವೊಂದರಲ್ಲಿ ರಿಂಗು ಕೇಳುತ್ತಿತ್ತು. ಹೋಗಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಆತ್ಮಹತ್ಯೆ ಮಾಡುವ ಮೊದಲು ಈತ ಚೀಟಿಯನ್ನು ಬರೆದು ಕಿಸೆಯಲ್ಲಿಟ್ಟಿದ್ದು, ಇದೀಗ ಚೀಟಿ ಪೊಲೀಸರ ಕೈ ಸೇರಿದೆ. ಪ್ರೇಮ ವೈಫಲ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಗರ ಠಾಣಾ ಇನ್ಸ್ಪೆಕ್ಟರ್ ಆನಂತ ಪದ್ಮನಾಭ ಮತ್ತು ಎಸ್ಐ ರಾಮಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಘಟನೆ 2: ಅಜ್ಜ ಮೊಬೈಲ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕ ಯಶವಂತ್ ಕೂಡ ಅದೇ ಮಾರ್ಗ ಅನುಸರಿಸಿದ್ದಾನೆ. ಅಕ್ಟೋಬರ್ 8ರಂದು ನಡೆದಿದ್ದ ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್ ತನ್ನ ಮೊಬೈಲ್ ಕಳೆದುಕೊಂಡಿದ್ದನು. ಹಾಗಾಗಿ ತನಗೆ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಇತ್ತೀಚೆಗೆ ಹಠ ಹಿಡಿದಿದ್ದನು. ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಅಜ್ಜ ಸಹ ತಿಳಿವಳಿಕೆ ಹೇಳಿದ್ದರು. ಆದರೆ, ತನ್ನ ಹಠವನ್ನು ಮುಂದುವರೆಸಿದ್ದ ಯಶವಂತ್, ಆತ್ಮಹತ್ಯೆಗೆ ಯತ್ನ ಮಾಡಿದ್ದನು.
ವಿಷಯ ತಿಳಿದ ಸಂಬಂಧಿಕರು ತಕ್ಷಣ ಆತನನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗಮಧ್ಯ ಕೊನೆಯುಸಿರೆಳೆದಿರುವುದಾಗಿ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಎಸ್‌ಐ ನಿಂದಿಸಿದ್ದಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಆರೋಪ - ದೂರು ದಾಖಲು