ಕಡಬ (ದಕ್ಷಿಣಕನ್ನಡ): ಇತ್ತೀಚೆಗೆ ಕಡಬ ತಾಲೂಕಿನ ಕೊಂಬಾರು ಗ್ರಾಮಕ್ಕೆ ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿತ್ತು. ಇದೀಗ ಕಾಡಾನೆಯನ್ನು ಅಂತ್ಯಕ್ರಿಯೆ ಮಾಡಿದ ಜಾಗಕ್ಕೆ ಎರಡು ಕಾಡಾನೆಗಳು ಬಂದು ಗೀಳಿಡುವ ಶಬ್ದ ಕೇಳಿಸುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಂಬಾರಿನ ಬೊಟ್ಟಡ್ಕ ಮೂಲಕವಾಗಿ ಬರುವ ಕಾಡಾನೆಗಳು ಸ್ಥಳೀಯರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಬಳಿಕ ಕಾಡಾನೆ ಸಾವನ್ನಪ್ಪಿದ ಜಾಗದತ್ತ ತೆರಳುತ್ತಿವೆ. ಇವೆ ಕಾಡಾನೆಗಳು ಮುಗೇರಡ್ಕ ಶಾಲೆ ವಠಾರ ಸೇರಿದಂತೆ ಉರುಂಬಿ, ಪುತ್ತಿಲ, ಬೊಟ್ಟಡ್ಕ ಭಾಗದಲ್ಲಿ ಸಂಚರಿಸುತ್ತಿವೆ ಎಂದು ಇಲ್ಲಿನ ಜನರು ಆತಂಕಕ್ಕೀಡಾಗಿದ್ದಾರೆ.
ಈ ಬಗ್ಗೆ ಇಂದು ಕಡಬದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಕೂಡಲೇ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕರಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗಳು ಆನೆ ಮೃತಪಟ್ಟ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ಆನೆ ಕಾರಿಡಾರ್ ಮತ್ತು ಮೆಸ್ಕಾಂ ರಕ್ಷಾ ಕವಚವಿರುವ ಕೇಬಲ್ ಅಳವಡಿಸಿ, ಕಾಡುಪ್ರಾಣಿಗಳು ಹಾಗೂ ಸ್ಥಳೀಯರಿಗೆ ರಕ್ಷಣೆ ನೀಡುವುದು ಅನಿವಾರ್ಯ ಎಂದಿದ್ದಾರೆ. ಆನೆಗಳು ತಮ್ಮ ಬಳಗದ ಸದಸ್ಯನೊಬ್ಬ ಸಾವನ್ನಪ್ಪಿದ್ದಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಿರುವ ಸಂಗತಿ ಸ್ಥಳೀಯರಿಗೆ ಬೇಸರ ತರಿಸಿದ್ದರೂ, ಯಾವಾಗ ತಮಗೆ ಆಪತ್ತು ಎದುರಾಗುತ್ತದೋ ಎಂಬ ಭಯದಲ್ಲಿದ್ದಾರೆ.