ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿತರಿಬ್ಬರೂ ಮಹಾರಾಷ್ಟ್ರದಿಂದ ಬಂದಿದ್ದಾರೆ ಎನ್ನಲಾಗುತ್ತಿದೆ.
25 ವರ್ಷದ ಯುವಕ ಮೇ 28ರಂದು ದೆಹಲಿಯಿಂದ ರೈಲಿನಲ್ಲಿ ಬಂದಿದ್ದು, ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಇಂದು ಇವರಿಗೆ ಕೊರೊನಾ ದೃಢಪಟ್ಟಿದೆ. ಮತ್ತೋರ್ವ 36 ವರ್ಷದ ವ್ಯಕ್ತಿ ಪುಣೆಯಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಆಗಮಿಸಿದ್ದ. ಕಾರ್ಕಳದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಪೂರ್ಣವಾದ ಬಳಿಕ ಕಟೀಲು ಗ್ರಾಮದ ಪಟ್ಟೆಜಾಲುವಿನ ಮನೆಯಲ್ಲಿ ವಾಸವಿದ್ದರು. ಅವರಿಗೆ ಇಂದು ಕೊರೊನಾ ದೃಢಪಟ್ಟಿದೆ. ಇಬ್ಬರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. 25, 17, 24 ವರ್ಷದ ಪುರುಷರು ಮತ್ತು 33 ವರ್ಷದ ಮಹಿಳೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 139 ಎರಡು ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 73 ಮಂದಿ ಗುಣಮುಖರಾಗಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದು, 59 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 75 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.