ಉಳ್ಳಾಲ: ಇಲ್ಲಿನ ತೊಕ್ಕೊಟ್ಟಿನ ವಸ್ತ್ರ ಮಳಿಗೆಯೊಂದರಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಕೈಚಳಕ ತೋರಿದ್ದು, ನೈಟಿಗಳನ್ನು ಬುರ್ಖಾದ ಒಳಗಿಟ್ಟು ಎಗರಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೊಕ್ಕೊಟ್ಟು ಒಳಪೇಟೆಯ ಚರ್ಚ್ ರಸ್ತೆಯಲ್ಲಿರುವ ವೆಲಂಕಣಿ ಲೇಡೀಸ್ ಸೆಲೆಕ್ಷನ್ಸ್ ಕಮ್ ಸ್ಟುಡಿಯೋದಲ್ಲಿ ಮಾ.7ರಂದು ಮಧ್ಯಾಹ್ನ ಈ ಘಟನೆ ನಡೆದಿದುದಾಗಿ ತಿಳಿದು ಬಂದಿದೆ. ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಕೈಚಳಕ ತೋರಿದ್ದಾರೆ. ಬಟ್ಟೆ ಅಂಗಡಿಯ ಸಿಬ್ಬಂದಿ ಕೆಳಗಡೆ ಬಾಗಿ ಹುಡುಕಾಟ ನಡೆಸುತ್ತಿದ್ದಾಗ ಕಪಾಟಿನಿಂದ ಏಳೆಂಟು ನೈಟಿಗಳನ್ನು ಬುರ್ಖಾದೊಳಗೆ ತುರುಕಿಕೊಂಡು ಕಾಲ್ಕಿತ್ತಿದ್ದಾರೆ.
ಬಳಿಕ ಮಳಿಗೆಯ ಮಾಲೀಕರು ಅನುಮಾನ ಬಂದು ರಾತ್ರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬುರ್ಖಾಧಾರಿ ಇಬ್ಬರು ಮಹಿಳೆಯರು ಬ್ಯಾರಿ ಭಾಷೆ ಮಾತನಾಡುತ್ತಿದ್ದುದಾಗಿ ಮಳಿಗೆಯ ಮಹಿಳಾ ಸಿಬ್ಬಂದಿ ಹೇಳಿದ್ದಾರೆ. ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಅಂಗಡಿ ಮಾಲೀಕರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ರಷ್ಯಾ ದಾಳಿಗೆ ಮೂರು ಮಕ್ಕಳು ಸೇರಿ 7 ಮಂದಿ ಸಾವು: ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಕೂಡ ಬಲಿ