ಮಂಗಳೂರು: ಕೊರೊನಾ ವೈರಸ್ನಿಂದಾಗಿ ಎಲ್ಲ ರಂಗದ ಮೇಲೂ ದುಷ್ಪರಿಣಾಮ ಬೀರಿದೆ. ಅದರಲ್ಲಿಯೂ ಸಿನಿಮಾ ಮತ್ತು ರಂಗಕಲಾವಿದರ ಬದುಕು ಬೀದಿಗೆ ಬಂದಿದೆ. ಈ ಸಂಕಷ್ಟದ ಸಂದರ್ಭದಲ್ಲಿ ತುಳು ಕಲಾವಿದರೊಬ್ಬರು ಆನ್ಲೈನ್ ಹೋಟೆಲ್ ವ್ಯಾಪಾರ ಆರಂಭಿಸಿ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ.
ಕೊರೊನಾ ವೈರಸ್ ಹಾವಳಿಯ ಬಳಿಕ ಸಿನಿಮಾ ರಂಗದ ಕಲೆಗಳಿಗೆ ದುಷ್ಪರಿಣಾಮ ಬೀರಿದೆ. ಬಡ ಮತ್ತು ಮಧ್ಯಮ ವರ್ಗದ ಕಲಾವಿದರು ಸಿನಿಮಾ ಶೂಟಿಂಗ್ ಇಲ್ಲದೇ ತೀವ್ರ ಆರ್ಥಿಕ ಮುಗ್ಗಟ್ಟಿಗೊಳಗಾಗಿದ್ದಾರೆ. ಕರಾವಳಿ ಜಿಲ್ಲೆಯಲ್ಲಿಯೂ ಕೋಸ್ಟಲ್ ವುಡ್ನಲ್ಲಿ ನೂರಾರು ಕಲಾವಿದರು ಸಿನಿಮಾ ರಂಗವನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಲಾಕ್ಡೌನ್ ಸಮಯದಲ್ಲಿ ಶೂಟಿಂಗ್ ಇಲ್ಲದೇ ಇವರೆಲ್ಲರೂ ಆತಂಕಕ್ಕೊಳಗಾಗಿದ್ದಾರೆ. ಇದರ ನಡುವೆ ತುಳು ಸಿನಿರಂಗದ ಖ್ಯಾತ ಕಲಾವಿದ ವಿಸ್ಮಯ ವಿನಾಯಕ್ ಅವರು ಮಾಡಿದ ಹೊಸಪ್ರಯತ್ನ ಅವರನ್ನು ಈ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿದಿದೆ.
ವೈರಸ್ ಹಾವಳಿ ಆರಂಭವಾದ ಬಳಿಕ ಮುಂದಿನ ಸಂಕಷ್ಟದ ಪರಿಸ್ಥಿತಿ ಊಹಿಸಿ ಬೈಯದ ಬಡವು ( ಸಂಜೆಯ ಹಸಿವು) ಎಂಬ ಹೆಸರಿನಲ್ಲಿ ಆನ್ಲೈನ್ ಹೋಟೆಲ್ ಆರಂಭಿಸಿದ್ದರು. ಇದು ಆರಂಭವಾದ ಕೆಲವೇ ತಿಂಗಳುಗಳಲ್ಲಿ ಬಂದ ಕೊರೊನಾ 2ನೇ ಅಲೆಯಿಂದಾಗಿ ಸಂಪೂರ್ಣ ಲಾಕ್ಡೌನ್ ಜಾರಿಯಾಯಿತು. ಈ ಸಂದರ್ಭದಲ್ಲಿ ಅವರು ಆನ್ಲೈನ್ ಹೋಟೆಲ್ ಆರಂಭಿಸಿದರು. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಪೋನ್ನಲ್ಲಿ ಬರುವ ಆರ್ಡರ್ಗಳಿಗೆ ತಕ್ಕಂತೆ ಹೋಂ ಡೆಲಿವರಿ ಆರಂಭಿಸಿ ಯಶಸ್ವಿಯಾಗಿದ್ದಾರೆ.
ಇವರ ಪ್ರಯತ್ನ ಇತರ ಕಲಾವಿದರಿಗೂ ಮಾದರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಇದೇ ರೀತಿಯ ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಪ್ರಯತ್ನಿಸಿದರೆ ಸಮಸ್ಯೆಯಲ್ಲಿರುವ ಕಲಾವಿದರಿಗೆ ತಕ್ಕಮಟ್ಟಿನ ಸಹಾಯವಾಗಬಹುದು ಎನ್ನುತ್ತಾರೆ ಇವರೊಂದಿಗೆ ಕೈಜೋಡಿಸಿರುವ ಕಲಾವಿದ ಗುರುಪ್ರಸಾದ್.
ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್ಗೆ ಅರುಣ್ ಸಿಂಗ್ ಆಗಮನ