ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಾಲ್ಕು ಗೋಡೆಗಳ ಮಂದಿರ ನಿರ್ಮಾಣ ಕಾರ್ಯ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಪುನರುತ್ಥಾನ ಇದರ ಜೊತೆಜೊತೆಗೆ ಆಗಬೇಕಾಗಿದೆ. ಭಗವಂತನ ಎಚ್ಚರಿಕೆಯೊಂದಿಗೆ ಬದುಕನ್ನು ಸಾಗಿಸುವ ಕಾರ್ಯ ಆಗಬೇಕಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ನ ಮಾರ್ಗದರ್ಶನ ಮಂಡಲದ ಸಮಾವೇಶ, ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ್ದ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆಗಬೇಕೆಂಬುದು ಭಾರತೀಯರ ಶತಶತಮಾನದ ಕನಸು. ಈ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ರಾಮಜನ್ಮಭೂಮಿ ನ್ಯಾಸ ಮಂಚ ಟ್ರಸ್ಟ್ ನಿಂದ ಒಂದಿಷ್ಟು ಮಂದಿರ ನಿರ್ಮಾಣದ ಕಾರ್ಯಗಳು ನಡೆದಿದೆ. ಇಟ್ಟಿಗೆ ಪೂಜೆ, ಮಂದಿರಕ್ಕೆ ಬೇಕಾದ ಶಿಲಾಮಯ ಕೆತ್ತನೆ ಕಾರ್ಯ ಸಿದ್ಧವಾಗಿದೆ. ಈ ಬಾರಿ ಮಂದಿರದ ವಿಸ್ತೀರ್ಣವನ್ನು ಹಿಂದಿಗಿಂತ ಒಂದು ಕೆಳ ಅಂತಸ್ತನ್ನು ಹೆಚ್ಚಿಸಿ ಇನ್ನೂ ಭವ್ಯ ಸ್ವರೂಪ ನೀಡಲಾಗಿದೆ ಎಂದು ಹೇಳಿದರು.
ಭೂಮಿಯ ಧಾರಣಾ ಶಕ್ತಿ ಪರಿಶೀಲನೆ:
ಪ್ರಸ್ತುತ ಶಿಲಾಮಯವಾಗಿರುವ ದೇಗುಲ ತಲೆಯೆತ್ತಿ ನಿಲ್ಲಲು ಬೇಕಾಗಿರುವ ಧಾರಣ ಶಕ್ತಿ ಅಯೋಧ್ಯೆಯ ರಾಮಜನ್ಮ ಭೂಮಿ ನೆಲಕ್ಕೆ ಇದೆಯೇ ಎಂಬ ಪರಿಶೀಲನೆ ನಡೆಯುತ್ತಿದೆ. ಅಲ್ಲಿನ ಭೂಮಿ ನಮ್ಮ ನೆಲದಷ್ಟು ಗಟ್ಟಿಯಲ್ಲ. ಧೂಳಿನಂತಿರುವ ಮಣ್ಣಿನ ನೆಲದ 200 ಅಡಿಗಳಷ್ಟು ಕೆಳಗಿನವರೆಗೆ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಮಂದಿರ ನಿರ್ಮಾಣದ ಕಾರ್ಯವನ್ನು ಎಲ್ಆ್ಯಂಡ್ಟಿ ಕಂಪೆನಿಗೆ ವಹಿಸಲಾಗಿದ್ದು, ಅಲ್ಲದೆ ಹಂತಹಂತವಾಗಿ ಮಂದಿರ ನಿರ್ಮಾಣ ಕಾರ್ಯವನ್ನು ಪರಿಶೀಲನೆ ನಡೆಸಲು ಟಾಟಾ ಕನ್ಸಲ್ಟನ್ಸಿ ಕಂಪನಿಗೆ ವಹಿಸಲಾಗಿದೆ ಎಂದು ಹೇಳಿದರು.
ಮಂದಿರ ನಿರ್ಮಾಣಕ್ಕೆ ರಾಮಭಕ್ತರಿಂದ ದೇಣಿಗೆ:
ರಾಮಮಂದಿರ ನಿರ್ಮಾಣಕ್ಕೆ ಎಲ್ಲರ ಪಾಲುದಾರಿಕೆ ಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹ ಕಾರ್ಯವು ಜ.15ರ ಮಕರ ಸಂಕ್ರಮಣದ ಮರುದಿನದಿಂದ ಆರಂಭವಾಗುತ್ತದೆ. ದೇಣಿಗೆಗೆ 10, 100, 2000 ಹೀಗೆ ವಿವಿಧ ರಸೀದಿಗಳು ಇದ್ದು, ರಾಮ ಭಕ್ತರು ತಮ್ಮ ಶಕ್ತ್ಯಾನುಸಾರ ಇದರ ರಸೀದಿ ಪಡೆದು ಮಂದಿರ ನಿರ್ಮಾಣ ಕಾರ್ಯದಲ್ಲಿ ತಮ್ಮ ಸೇವೆ ಸಲ್ಲಿಸಬಹುದು. ಮುಂದಿನ ಮೂರುವರೆ ವರ್ಷದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಬಹುದು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪ್ರಧಾನಿ ಮೋದಿಯವರ ಸಂಕಲ್ಪ:
ರಾಮಮಂದಿರದ ಶ್ರೀರಾಮಚಂದ್ರನ ಪ್ರತಿಮೆಗೆ ರಾಮ ನವಮಿಯಂದು ಸೂರ್ಯನ ಬೆಳಕು ಬೀಳುವ ರೀತಿಯಲ್ಲಿ ಸಂಯೋಜನೆ ಮಾಡಬೇಕೆಂದು ಪ್ರಧಾನಿ ಮೋದಿಯವರು ಸೂಚನೆ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಸಿಎಸ್ಐಆರ್ (ಕೌನ್ಸಿಲ್ ಫಾರ್ ಇಂಡಸ್ಟ್ರಿಯಲ್ ರಿಸರ್ಚ್) ಸಂಸ್ಥೆಗೆ ವಹಿಸಲಾಗಿದೆ. ತಾವು ಈ ಕಾರ್ಯ ಮಾಡುತ್ತೇವೆ ಎಂದು ಆ ಸಂಸ್ಥೆಯೂ ಒಪ್ಪಿಗೆ ನೀಡಿದೆ ಎಂದರು.
ಅಲ್ಲದೆ ಭಕ್ತರು ಶ್ರೀರಾಮಚಂದ್ರ ದೇವರಿಗೆ ನಮಿಸುವಾಗ, ಆತನ ಪಾದ ಮುಟ್ಟಿ, ಪಾದದ ಮೇಲೆ ಶಿರವನ್ನಿರಿಸಿ ನಮಸ್ಕರಿಸಿದಂತೆ ಕಲ್ಪನೆ ಬರುವ ರೀತಿಯಲ್ಲಿ ತ್ರೀಡಿ ಸಂಯೋಜನೆ ಮಾಡಬೇಂದು ಸೂಚನೆ ನೀಡಿದ್ದಾರೆ. ಅದನ್ನು ಡಿಎಸ್ಟಿ (ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ) ಎಂಬ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯೂ ಪ್ರಧಾನಿಯವರ ಚಿಂತನೆಯನ್ನು ಸಾಕಾರಗೊಳಿಸುತ್ತೇವೆ ಎಂದು ಒಪ್ಪಿಗೆ ನೀಡಿದ್ದಾರೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.