ಉಪ್ಪಿನಂಗಡಿ (ದ.ಕ): ಅಡಿಕೆ ವರ್ತಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ 3.50 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ ಪ್ರಕರಣದ ಮೂವರು ಆರೋಪಿಗಳನ್ನು ಹತ್ತು ದಿನದ ಬಳಿಕ ಬಂಧಿಸುವಲ್ಲಿ ಉಪ್ಪಿನಂಗಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ಧಾರೆ.
ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಂಧಿತರಿಂದ ದರೋಡೆಗೈಯಲಾದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಸಜಿಪನಡುವಿನ ಕೋಟೆಕನಿ ನಿವಾಸಿ ಅಫ್ರೀದ್ (22), ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಜುರೈಝ್ (20) ಹಾಗೂ ಬಂಟ್ವಾಳ ಕಡೆಶಿವಾಲಯ ನಿವಾಸಿ ಮೊಹಮ್ಮದ್ ತಂಝಿಲ್ (22 ) ಬಂಧಿತ ಆರೋಪಿಗಳು. ಆರೋಪಿಗಳ ಬಳಿಯಿಂದ ಆಕ್ಟಿವಾ ಸ್ಕೂಟಿ, ಕೃತ್ಯಕ್ಕೆ ಬಳಸಿದ ಚಾಕು, ನಗದು ಹಾಗೂ 3 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ... ?
ಪೆರ್ನೆಯಲ್ಲಿ ಅಡಿಕೆ ಖರೀದಿ ವ್ಯಾಪಾರ ಮಾಡುತ್ತಿದ್ದ ಪದೆಬರಿ ನಿವಾಸಿ ದೀಪಕ್ ಜೆ. ಶೆಟ್ಟಿ ಅ.27 ರ ಸಂಜೆ 6 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಅಡಿಕೆ ಮಾರಾಟದಿಂದ ಸಿಕ್ಕಿದ 3.50 ಲಕ್ಷ ರೂಪಾಯಿಗಳೊಂದಿಗೆ ಬೈಕ್ನಲ್ಲಿ ಮನೆಗೆ ಮರಳುತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರ ತಂಡದಿಂದ ಹಲ್ಲೆ ನಡೆದಿದೆ.
ಬೈಕ್ನಿಂದ ಇಳಿದ ತಂಡ ದೀಪಕ್ ಶೆಟ್ಟಿಯವವರ ತಲೆಯ ಬಲ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ತಿವಿದು ಮೋಟಾರ್ ಸೈಕಲ್ನಲ್ಲಿದ್ದ ಮೂರೂವರೆ ಲಕ್ಷದ ಹಣದ ಬ್ಯಾಗ್ ಮತ್ತು ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆಗೆ ದ.ಕ ಜಿಲ್ಲಾ ಪೊಲೀಸ್ ಆಧೀಕ್ಷಕರ ಆದೇಶದಂತೆ, ಉಪ್ಪಿನಂಗಡಿ ಠಾಣೆ ಪ್ರೊಬೆಷನರಿ ಐಪಿಎಸ್ ರೋಹನ್ ಜಗದೀಶ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಉಪ್ಪಿನಂಗಡಿ ಠಾಣಾ ಎಸ್ಐ ಈರಯ್ಯ ಡಿ.ಎನ್. ನೇತೃತ್ವದ ವಿಶೇಷ ಅಪರಾಧ ಪತ್ತೆ ದಳವನ್ನು ತನಿಖೆಗೆ ನಿಯೋಜಿಸಲಾಗಿತ್ತು. ಈ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.