ಪುತ್ತೂರು(ದಕ್ಷಿಣ ಕನ್ನಡ) : ಕೊರೊನಾ ಲಾಕ್‌ಡೌನ್‌ನಿಂದ ಭಾರತದ ಆರ್ಥಿಕತೆ ಮತ್ತು ಜನ ಜೀವನಕ್ಕೆ ಆದ ಹೊಡೆತವನ್ನು ನೀಗಿಸುವ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ದೊಡ್ಡ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಕ್ಯಾಟಲ್ ಫೀಡ್ ಫ್ಯಾಕ್ಟರಿ ತೆರೆಯುವ ಚಿಂತನೆ ನಮ್ಮ ಮುಂದಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಪ್ರಧಾನಿಯವರ ಉದ್ದೇಶ ಸ್ವಾವಲಂಭಿ ಭಾರತ. ಆರ್ಥಿಕ ಚೈತನ್ಯವನ್ನು ನೀಡುವ ಕೆಲಸ ಆಗಿದೆ. ಪ್ರಮುಖವಾಗಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ರೂ. 3 ಲಕ್ಷ ಕೋಟಿ ನೀಡಿದೆ. ವಿಶೇಷವಾಗಿ ಆರ್ಥಿಕವಾಗಿ ಉತ್ತೇಜನ ಕೊಡುವ ಸಲುವಾಗಿ ಮೀನುಗಾರಿಕೆ ಸಚಿವಾಲಯವನ್ನು ಪ್ರತ್ಯೇಕ ತೆರೆಯಲಾಗುತ್ತದೆ. ಆದಾಯ ತೆರಿಗೆ ಕಟ್ಟುವವರಿಗೂ ಸೌಲಭ್ಯ ನೀಡುತ್ತಿದ್ದು, ಕಾರ್ಖಾನೆ ನಿರ್ಮಾಣಕ್ಕೂ ಸಾಲದ ವ್ಯವಸ್ಥೆ ಮಾಡಲಾಗಿದ್ದು, ಉದ್ಯೋಗಳನ್ನು ಸೃಷ್ಟಿ ಮಾಡಿ ಗ್ರಾಮೀಣ ಭಾರತವನ್ನು ಅಭಿವೃದ್ಧಿ ಮಾಡುವುದು ಪ್ರಧಾನಿ ಉದ್ದೇಶವಾಗಿದೆ ಎಂದರು.
ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಂಡು ಕೊಳ್ಳುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಅದರ ಜೊತೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಡಾ ಒಂದಷ್ಟು ಪ್ಯಾಕೇಜ್ ನೀಡಿದ್ದಾರೆ ಎಂದು ತಿಳಿಸಿದರು.